ಇನ್ನೂ ಚಾಲ್ತಿಯಲ್ಲಿದೆ 50 ಪೈಸೆ… 1 ರಿಂದ 20 ರೂ. ನಾಣ್ಯಗಳ ಬಗ್ಗೆ ಮಹತ್ವದ ಸ್ಪಷ್ಟನೆ ಕೊಟ್ಟ ಆರ್​ಬಿಐ!

Picture of Savistara

Savistara

Bureau Report

ನವದೆಹಲಿ: ಯಾವುದೇ ಅಂಗಡಿ ಅಥವಾ ಸ್ಟೋರ್​ಗೆ ಹೋಗಿ ಏನಾದರೂ ಖರೀದಿ ಮಾಡಿ 10 ಅಥವಾ 20 ರೂಪಾಯಿ ನಾಣ್ಯ ನೀಡಿದರೆ ಅಂಗಡಿ ಮಾಲೀಕ ಅದನ್ನು ತೆಗೆದುಕೊಳ್ಳುವದೇ ಇಲ್ಲ. ನಾಣ್ಯದ ಬದಲು ನೋಟು ಇದ್ದರೆ ಕೊಡಿ ಎಂದು ಕೇಳುವುದನ್ನು ನಾವು-ನೀವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಇದನ್ನು ಪ್ರಶ್ನೆ ಮಾಡಿದರೆ, ಈ ನಾಣ್ಯ ಚಲಾವಣೆಯಲ್ಲಿ ಇಲ್ಲ ಎಂದು ಸಬೂಬು ನೀಡುತ್ತಾರೆ. ಇನ್ನು 50 ಪೈಸೆಯ ಕತೆಯಂತೂ ಕೇಳಂಗೇ ಇಲ್ಲ. ಈ ನಾಣ್ಯ ನೋಡುವುದೇ ಇಂದು ಅಪರೂಪವಾಗಿದೆ. ಯಾರಿಗಾದರೂ ಈ ನಾಣ್ಯವನ್ನು ನೀಡಿದರೆ ನಿಮ್ಮನ್ನೇ ವಿಚಿತ್ರವಾಗಿ ನೋಡುವುದರಲ್ಲಿ ಅನುಮಾನವೇ ಬೇಡ. ಏಕೆಂದರೆ, ಈ ನಾಣ್ಯ ಚಾಲ್ತಿಯಲ್ಲೇ ಇಲ್ಲ. ಇದನ್ನು ನಿಷೇಧಿಸಿ ಬಹಳ ವರ್ಷಗಳೇ ಕಳೆದಿವೆ ಎನ್ನುವಂತೆ ಮಾತನಾಡುತ್ತಾರೆ. ಆದರೆ, ಇದೆಲ್ಲ ಸುಳ್ಳು ಎಂದು ಭಾರತೀಯ ರಿಸರ್ವ್​ ಬ್ಯಾಂಕ್​ ( RBI ) ಇದೀಗ ಸ್ಪಷ್ಟನೆ ನೀಡಿದೆ.

50 ಪೈಸೆಯಿಂದ ಹಿಡಿದು 20 ರೂ.ವರೆಗಿನ ನಾಣ್ಯಗಳು ಇನ್ನೂ ಕಾನೂನುಬದ್ಧವಾಗಿ ಚಲಾವಣೆಯಲ್ಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇತ್ತೀಚೆಗೆ ಸ್ಪಷ್ಟಪಡಿಸಿದ್ದು, ಅವುಗಳ ಸಿಂಧುತ್ವದ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಗೊಂದಲ ಮತ್ತು ತಪ್ಪು ಮಾಹಿತಿಗೆ ತೆರೆಎಳೆದಿದೆ. ನಾಣ್ಯಗಳ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಆರ್​ಬಿಐ ಅಭಿಯಾನ ಆರಂಭಿಸಿದೆ. “ಆರ್‌ಬಿಐ ಕೆಹ್ತಾ ಹೈ” ಎಂಬ ಬ್ಯಾನರ್ ಅಡಿಯಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿರುವ ಆರ್​ಬಿಐ, ವಾಟ್ಸ್​ಆ್ಯಪ್​ ಮೂಲಕ ಜನರಿಗೆ ವಿಡಿಯೋ ಸಂದೇಶ ಹಂಚಿಕೊಂಡಿದೆ. ನಾಗರಿಕರು ನಾಣ್ಯಗಳೊಂದಿಗೆ ವಹಿವಾಟು ನಡೆಸಲು ಪ್ರಯತ್ನಿಸುತ್ತಿರುವ ಎರಡು ವಿಡಿಯೋಗಳನ್ನು ಆರ್​ಬಿಐ ಬಿಡುಗಡೆ ಮಾಡಿದೆ. ಆ ವಿಡಿಯೋಗಳಲ್ಲಿ ಕೆಲ ಅಂಗಡಿ ಮಾಲೀಕರು ನಾಣ್ಯ ಸ್ವೀಕರಿಸದೇ ಇರುವುದನ್ನು ತೋರಿಸಲಾಗಿದೆ. ಅದೇ ರೀತಿ ವಿಡಿಯೋ ಕೊನೆಯಲ್ಲಿ ಓರ್ವ ಅಂಗಡಿ ಮಾಲೀಕ ನಾಣ್ಯ ಸ್ವೀಕರಿಸುವುದನ್ನು ತೋರಿಸುವ ಮೂಲಕ ನಾಣ್ಯಗಳು ಇನ್ನೂ ಮಾನ್ಯವಾಗಿವೆ ಮತ್ತು ಚಾಲ್ತಿಯಲ್ಲಿದ್ದು, ಭಾರತದಲ್ಲಿ ಎಲ್ಲಿ ಬೇಕಾದರೂ ಪಾವತಿಸಬಹುದು ಎಂಬ ಸಂದೇಶವನ್ನು ಒತ್ತಿಹೇಳಿದೆ. ನಾಣ್ಯಗಳ ಕುರಿತಾದ ವದಂತಿಗಳನ್ನು ಯಾರೂ ನಂಬಬೇಡಿ. ಒಂದೇ ಮೌಲ್ಯದ ವಿಭಿನ್ನ ನಾಣ್ಯ ವಿನ್ಯಾಸಗಳು ದೀರ್ಘಕಾಲದವರೆಗೆ ಚಲಾವಣೆಯಲ್ಲಿರುತ್ತವೆ. ಅವೆಲ್ಲವೂ ಸ್ವೀಕಾರಾರ್ಹ ಎಂದು ಆರ್‌ಬಿಐ ವಿಡಿಯೋದಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಅನೇಕ ವ್ಯಾಪಾರಿಗಳು, ವಿಶೇಷವಾಗಿ 50 ಪೈಸೆ ಹಾಗೂ 10 ರೂ. ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ನಾಣ್ಯಗಳ ಬದಲಿಗೆ ನೋಟನ್ನು ಕೇಳುತ್ತಿದ್ದಾರೆ ಎಂಬ ಸಾಕಷ್ಟು ವರದಿಗಳು ಬಂದ ಬಳಿಕ ಆರ್​ಬಿಐ ಈ ಕ್ರಮ ತೆಗೆದುಕೊಂಡಿದೆ. ಪ್ರಸ್ತುತ, ದೈನಂದಿನ ವಹಿವಾಟುಗಳಲ್ಲಿ ಈ ಮುಖಬೆಲೆಯ ನಾಣ್ಯಗಳು ವಿರಳವಾಗಿ ಕಂಡುಬರುತ್ತಿದ್ದರೂ ಇವುಗಳನ್ನು ಇನ್ನೂ ರದ್ದುಪಡಿಸಿಲ್ಲ ಮತ್ತು ನಾಗರಿಕರು ಅದನ್ನು ಮುಕ್ತವಾಗಿ ಬಳಸುವುದನ್ನು ಮುಂದುವರಿಸಬಹುದು ಎಂದು ಆರ್‌ಬಿಐ ಒತ್ತಿ ಹೇಳಿದೆ.

ಹಳೆಯ ವಿನ್ಯಾಸಗಳನ್ನು ಒಳಗೊಂಡಂತೆ ನಾಣ್ಯಗಳು ನಮ್ಮ ದೇಶದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳು ಮತ್ತು ಮೌಲ್ಯಗಳನ್ನು ಪ್ರತಿನಿಧಿಸುವ ವಿಶಿಷ್ಟ ಲಕ್ಷಣಗಳನ್ನು ಹೊಂದಿವೆ ಮತ್ತು ಕಾಲಕಾಲಕ್ಕೆ ಪರಿಚಯಿಸಲ್ಪಡುತ್ತವೆ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆರ್‌ಬಿಐ ಕೆಹ್ತಾ ಹೈ ಅಭಿಯಾನದ ಮೂಲಕ, ಸಾರ್ವಜನಿಕರು ಯಾವುದೇ ಹಿಂಜರಿಕೆಯಿಲ್ಲದೆ ನಾಣ್ಯಗಳನ್ನು ಬಳಸುವಂತೆ ಆರ್​ಬಿಐ ಒತ್ತಾಯಿಸಿದೆ. ಅಲ್ಲದೆ, ವ್ಯಾಪಾರಿಗಳನ್ನು ನಿಯಮಿತ ನಗದು ವಹಿವಾಟಿನ ಭಾಗವಾಗಿ ಅವುಗಳನ್ನು ಸ್ವೀಕರಿಸುವಂತೆ ಸೂಚನೆ ನೀಡಿದೆ.

ಅಂದಹಾಗೆ, ಆರ್​ಬಿಐ ನೀಡಿರುವ ಈ ಸ್ಪಷ್ಟನೆ 50 ಪೈಸೆ, ರೂ. 1, ರೂ. 2, ರೂ. 5, ರೂ. 10 ಮತ್ತು ರೂ. 20 ಸೇರಿದಂತೆ ಎಲ್ಲಾ ಮುಖಬೆಲೆಯ ನಾಣ್ಯಗಳು ಭಾರತದಾದ್ಯಂತ ಕಾನೂನುಬದ್ಧವಾಗಿ ಚಲಾವಣೆಯಲ್ಲಿವೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. ಯಾರಾದರೂ ಮತ್ತೊಮ್ಮೆ ಪ್ರಶ್ನೆ ಮಾಡಿದರೆ ಆರ್​ಬಿಐ ಬಿಡುಗಡೆ ಮಾಡಿರುವ ವಿಡಿಯೋವೊಂದನ್ನು ಅವರಿಗೆ ತೋರಿಸಿ,

[t4b-ticker]
error: Content is protected !!