Omar Abdullah: ಬಿಹಾರದಲ್ಲಿ ನಡೆದ ಹಿಜಾಬ್ ವಿವಾದದ ಕಳೆದ ಮೂರು ದಿನಗಳಿಂದ ದೇಶ್ಯಾದ್ಯಂತ ಸುದ್ದಿಯಲ್ಲಿದ್ದು, ನಿತೀಶ್ ಕುಮಾರ್ರನ್ನು ಟೀಕಿಸಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ತಮ್ಮ ರಾಜಕೀಯ ಪ್ರತಿಸ್ಪರ್ಧಿ ಮೆಹಬೂಬಾ ಮುಫ್ತಿ ವಿರುದ್ಧ ಕೂಡ ಗಂಭೀರ ಆರೋಪ ಮಾಡಿದ್ದಾರೆ.
ಶ್ರೀನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಬ್ದುಲ್ಲಾ, ಮಹಿಳಾ ವೈದ್ಯೆಯ ಹಿಜಾಬ್ ತೆಗೆಯುವ ಮೂಲಕ ನಿತೀಶ್ ಕುಮಾರ್ ಕೋಮುವಾದಿ ಪಕ್ಷದ ಮಿತ್ರನಾಗಿ ತನ್ನ ನಿಜವಾದ ಬಣ್ಣ ತೋರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು, ಇತ್ತ ಈ ಪ್ರವೃತ್ತಿಗೆ ನಾಂದಿ ಹಾಡಿದವರು ಮೆಮಬೂಬಾ ಮುಫ್ತಿ ಎಂದು ನೆನಪಿಸಿಕೊಂಡಿದ್ದಾರೆ.
ನಾವು ಈ ಹಿಂದೆಯೂ ಇಂತಹ ಘಟನೆಗಳನ್ನು ನೋಡಿದ್ದೇವೆ. ನನ್ನ ಚುನಾವಣೆಯ ಸಮಯದಲ್ಲಿ, ಮೆಹಬೂಬಾ ಮುಫ್ತಿ ಮತಗಟ್ಟೆಯೊಳಗೆ ಕಾನೂನುಬದ್ಧ ಮತದಾರರ ಬುರ್ಖಾವನ್ನು ತೆಗೆದುಹಾಕಿದರು ಎಂಬುದನ್ನು ಜನರು ಮರೆತಿರಬಹುದು. ಈಗ ಇದು ಅದೇ ಮನಸ್ಥಿತಿಯ ಮುಂದುವರಿದ ಭಾಗವಾಗಿದೆ. ಈ ಘಟನೆ ದುರದೃಷ್ಟಕರ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು. ಏಪ್ರಿಲ್ 2004 ರಲ್ಲಿ ನಡೆದ ಚುನಾವಣೆಯ ಸಮಯದಲ್ಲಿ, ಮುಫ್ತಿ ಮಹಿಳೆಯೊಬ್ಬರ ಮುಸುಕನ್ನು ಎತ್ತಿದ್ದರು. ಇದಕ್ಕಾಗಿ ಟೀಕೆಗಳು ಎದುರಾದಾಗ ನಕಲಿ ಮತಗಳನ್ನು ಚಲಾಯಿಸಲು ಮುಸುಕನ್ನು ಹೆಚ್ಚಾಗಿ ಬಳಸಲಾಗುತ್ತಿರುವುದರಿಂದ, ಮತದಾರರ ಗುರುತನ್ನು ಪತ್ತೆ ಮಾಡಲು ಈ ರೀತಿ ಮಾಡಿದ್ದೇನೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಮೂರ್ನಾಲ್ಕು ದಿನಗಳ ಹಿಂದೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನೇಮಕಾತಿ ಪತ್ರ ಸ್ವೀಕರಿಸಲು ಬಂದಿದ್ದ ಮಹಿಳಾ ವೈದ್ಯರೊಬ್ಬರ ಮುಸುಕನ್ನು ನಿತೀಶ್ ಕುಮಾರ್ ಎಳೆದ ನಂತರ ಭಾರಿ ವಿವಾದ ಸೃಷ್ಟಿಯಾಗಿದೆ. ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಅಬ್ದುಲ್ಲಾ, ಮುಖ್ಯಮಂತ್ರಿಗಳು ಆದೇಶವನ್ನು ಆ ಯುವತಿಗೆ ಹಸ್ತಾಂತರಿಸಲು ಇಷ್ಟವಿಲ್ಲದಿದ್ದರೆ ಪಕ್ಕಕ್ಕೆ ಇಡಬಹುದಿತ್ತು. ಆದರೆ, ಅವರನ್ನು ಈ ರೀತಿ ಅವಮಾನಿಸಿದ್ದು ತಪ್ಪು ಎಂದು ಹೇಳಿದರು.ನಿತೀಶ್ ವರ್ತನೆಯ ವಿರುದ್ಧ ಕಿಡಿಕಾರಿದ್ದ ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಮೋದಿ ಸಾಹೇಬ್ ಇದರ ಬಗ್ಗೆ ಮಾತನಾಡಬೇಕಿತ್ತು, ಏಕೆಂದರೆ ಅವರು ಎನ್ಡಿಎದ ಪಾಲುದಾರರು. ಘಟನೆಯ ಕುರಿತಾಗಿ ಈ ಸರ್ಕಾರದಿಂದ ಬೆಂಬಲ ವಾಪಸ್ ಪಡೆಯಬೇಕಿತ್ತು ಎಂದಿದ್ದಾರೆ.
ಮುಫ್ತಿ ಹೇಳಿದ್ದೇನು..?
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮುಫ್ತಿ, ಈ ಘಟನೆಯನ್ನು ಆಘಾತಕಾರಿ ಮತ್ತು ತೀವ್ರ ತೊಂದರೆದಾಯಕ ಎಂದು ಕರೆದಿದ್ದಾರೆ. ಇಂತಹ ನಡವಳಿಕೆಗಳು ವೃದ್ಧಾಪ್ಯಕ್ಕೆ ಕಾರಣವಾಗಬಹುದೇ ಅಥವಾ ಮುಸ್ಲಿಮರನ್ನು ಸಾರ್ವಜನಿಕವಾಗಿ ಅವಮಾನಿಸುವ ಹೆಚ್ಚುತ್ತಿರುವ ಸಾಮಾನ್ಯೀಕರಣ ಎಂದು ಅವರು ವಿವರಿಸಿದ್ದನ್ನು ಪ್ರತಿಬಿಂಬಿಸುತ್ತದೆಯೇ ಎಂದು ಪ್ರಶ್ನಿಸಿದರು.ಇದಕ್ಕಿಂತ ಆತಂಕಕಾರಿ ಅಂಶವೆಂದರೆ ಅವರ ಸುತ್ತಲಿನ ಜನರು ಈ ಭಯಾನಕ ಘಟನೆಯನ್ನು ಮನರಂಜನೆಯಂತೆ ವೀಕ್ಷಿಸಿದರು, ಇದು ಸಾರ್ವಜನಿಕ ಪ್ರತಿನಿಧಿಗಳಿಂದ ನಿರೀಕ್ಷಿಸುವ ಸೂಕ್ಷ್ಮತೆ ಮತ್ತು ನಡವಳಿಕೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿತು ಎಂದು ಹೇಳಿದರು. ಘಟನೆಯ ಕುರಿತಂತೆ ನಿತೀಶ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ರಾಜೀನಾಮೆ ನೀಡುವುದು ಉತ್ತಮ ಎಂದು ಸಲಹೆ ನೀಡಿದ ಮುಫ್ತಿ, ಇಂತಹ ಕ್ರಮಗಳು ಅಲ್ಪಸಂಖ್ಯಾತರ ಘನತೆಯನ್ನು ಹಾಳುಮಾಡುತ್ತವೆ ಮತ್ತು ಪ್ರಜಾಪ್ರಭುತ್ವ ನಾಯಕತ್ವದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುತ್ತವೆ ಎಂದರು.
ಘಟನೆಯ ಹಿನ್ನಲೆ..
ತಮ್ಮ ಸಚಿವಾಲಯದಲ್ಲಿ ನಡೆದ ಸಂವಾದ್ ಎಂಬ ಅಭಿನಂದನಾ ಕಾರ್ಯಕ್ರಮದಲ್ಲಿ ಸಿಎಂ ನಿತೀಶ್ ಕುಮಾರ್ ಮುಖ ಗಂಟಿಕ್ಕಿ ಇದು ಏನು? ಎಂದು ಉದ್ಗರಿಸುತ್ತಾ ಯುವತಿಯ ಹಿಜಾಬ್ ಕೆಳಗೆ ಎಳೆದರು. ಸಿಎಂ ಪಕ್ಕದಲ್ಲಿ ನಿಂತಿದ್ದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಅವರ ತೋಳನ್ನು ಎಳೆದು ಅವರನ್ನು ತಡೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿತು. ಈ ಕಾರ್ಯಕ್ರಮದಲ್ಲಿ 1,000 ಕ್ಕೂ ಹೆಚ್ಚು ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ನೀಡಲಾಯಿತು.













































