ಮಂಗಳೂರು: ಮಳೆಗಾಲದ ಅಲೆಗಳ ನಡುವೆ ಸಸಿಹಿತ್ತು ಕಡಲತೀರದಲ್ಲಿ ನಿಗೂಢವಾಗಿ ಬಿಳಿ ನೊರೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಕುತೂಹಲದ ಜೊತೆಗೆ ಅದರ ಮೂಲದ ಬಗ್ಗೆ ಆತಂಕ ಎದುರಾಗಿದೆ.ಕೆಲವು ದಿನಗಳ ಹಿಂದೆ ಕುಂದಾಪುರ ಭಾಗದಲ್ಲಿ ಮೊದಲ ಬಾರಿಗೆ ಕಂಡುಬಂದಿದ್ದ ಈ ಬಿಳಿ ನೊರೆ ಇದೀಗ ಸಸಿಹಿತ್ಸು ಕರಾವಳಿಯಲ್ಲಿಯೂ ಕಂಡುಬಂದಿದೆ. ಸಮುದ್ರದ ಅಲೆಗಳೊಂದಿಗೆ ತೀರಕ್ಕೆ ತಲುಪುತ್ತಿರುವ ಈ ನೊರೆಯನ್ನು ಬಲವಾದ ಗಾಳಿ ಎಲ್ಲೆಡೆ ಚದುರಿಸುತ್ತಿದೆ. ಈ ನೊರೆಯು ಬಲೂನ್‌ಗಳಂತೆ ಗಾಳಿಯಲ್ಲಿ ತೇಲುತ್ತಿವೆ. ಕೆಲ ಸ್ಥಳೀಯರು ಹಾಗೂ ಮಕ್ಕಳು ಅದನ್ನು ಹಿಡಿದು ಆಟವಾಡುತ್ತಿರುವ ದೃಶ್ಯಗಳೂ ಕಂಡುಬಂದಿವೆ. ಈ ವಿದ್ಯಮಾನವು ಸಮುದ್ರದಲ್ಲಿ ನಡೆಯುವ ನೈಸರ್ಗಿಕ ಪ್ರಕ್ರಿಯೆಗಳ ಪರಿಣಾಮವಾಗಿರಬಹುದು. ಸಮುದ್ರದ ನೀರಿನಲ್ಲಿರುವ ಸಾವಯವ ಪದಾರ್ಥಗಳು, ಪಾಚಿ, ಸಸ್ಯಗಳ ಅವಶೇಷಗಳು ಹಾಗೂ ಅಲೆಗಳ ತೀವ್ರ ಚಲನೆಯಿಂದ ಇಂತಹ ನೊರೆ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಳೆಗಾಲದಲ್ಲಿ ನದಿಗಳ ಮೂಲಕ ಹೆಚ್ಚಿನ ಪ್ರಮಾಣದ ಮಣ್ಣು ಸಾವಯವ ತ್ಯಾಜ್ಯ ಹಾಗೂ ಖನಿಜಗಳು ಸಮುದ್ರ ಸೇರುತ್ತವೆ. ಇವು ಸಮುದ್ರದ ನೀರಿನೊಂದಿಗೆ ಬೆರೆತು ಪ್ರಬಲ ಅಲೆಗಳ ಹೊಡೆತಕ್ಕೆ ಒಳಗಾದಾಗ ನೈಸರ್ಗಿಕವಾಗಿ ಬಿಳಿ ನೊರೆ ರೂಪುಗೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಆದರೆ, ಕೈಗಾರಿಕಾ ತ್ಯಾಜ್ಯ ಅಥವಾ ರಾಸಾಯನಿಕ ಪದಾರ್ಥಗಳ ಪ್ರಭಾವವನ್ನೂ ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ನೊರೆಯ ಸ್ವಭಾವ, ಬಣ್ಣ ವಾಸನೆ ಹಾಗೂ ಅದರ ರಾಸಾಯನಿಕ ಸಂಯೋಜನೆಯನ್ನು ವೈಜ್ಞಾನಿಕವಾಗಿ ಪರೀಕ್ಷಿಸಿದ ಬಳಿಕವೇ ನಿಖರ ಕಾರಣವನ್ನು ತಿಳಿಯಲು ಸಾಧ್ಯ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಸಮುದ್ರದ ನೊರೆ ಅಪಾಯಕಾರಿಯಲ್ಲ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಅದರ ಮೂಲ ಸ್ಪಷ್ಟವಾಗುವವರೆಗೆ ಸಾರ್ವಜನಿಕರು ನೇರ ಸಂಪರ್ಕವನ್ನು ತಪ್ಪಿಸಿಕೊಳ್ಳುವುದು ಒಳಿತು ಎಂದು ತಜ್ಞರು ಸಲಹೆ ನೀಡಿದ್ದಾರೆ. ವಿಶೇಷವಾಗಿ ಮಕ್ಕಳು ಹಾಗೂ ಚರ್ಮದ ಅಲರ್ಜಿ ಇರುವವರು ಈ ನೊರೆಯೊಂದಿಗೆ ಆಟವಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ. ಸಮುದ್ರ ಮಾಲಿನ್ಯ ಹೆಚ್ಚಾದರೆ ಅದರ ಮೊದಲ ಪರಿಣಾಮ ಜಲಚರಗಳ ಮೇಲೆ ಬೀಳುತ್ತದೆ ಎಂದು ತಜ್ಞರು ಹೇಳಿದ್ದಾರೆ. ಮೀನುಗಳು ಸಾಮೂಹಿಕವಾಗಿ ಸಾಯುವುದು, ಸಮುದ್ರದ ನೀರಿನಿಂದ ದುರ್ವಾಸನೆ ಬರುವುದು ಅಥವಾ ನೀರಿನ ಬಣ್ಣದಲ್ಲಿ ಬದಲಾವಣೆ ಕಾಣಿಸುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.
ಇಲ್ಲಿಯವರೆಗೆ ಕರಾವಳಿ ಪ್ರದೇಶದಲ್ಲಿ ಇಂತಹ ಯಾವುದೇ ಅಸಾಮಾನ್ಯ ಬೆಳವಣಿಗೆಗಳು ವರದಿಯಾಗಿಲ್ಲ. ಕಳೆದ ಕೆಲವು ದಿನಗಳಿಂದ ನೊರೆ ಕಾಣಿಸುತ್ತಿರುವುದನ್ನು ಸ್ಥಳೀಯ ಮೀನುಗಾರರೂ ಗಮನಿಸಿದ್ದು, ಮೀನುಗಳ ಸಾವಿನಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಮಾಹಿತಿ ನೀಡಿದ್ದಾರೆ. ತಜ್ಞರ ಪ್ರಕಾರ, ಬಿಳಿ ನೊರೆ ಉಂಟಾಗಲು ಹಲವು ಕಾರಣಗಳಿರಬಹುದು. ಸಮುದ್ರದ ಅಲೆಗಳ ತೀವ್ರ ಚಲನೆಯಿಂದ ಸಾವಯವ ಪದಾರ್ಥಗಳು ಬೆರೆತಿರುವುದು, ಪಾಚಿ ಹಾಗೂ ಇತರ ಜೈವಿಕ ವಸ್ತುಗಳ ಕೊಳೆಯುವಿಕೆ, ಮಳೆಗಾಲದಲ್ಲಿ ನದಿಗಳ ಮೂಲಕ ಸಮುದ್ರ ಸೇರುವ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ ನೀರಿನ ಪ್ರಭಾವ ಹಾಗೂ ಸಮುದ್ರದ ತಾಪಮಾನ ಅಥವಾ ಹವಾಮಾನ ಬದಲಾವಣೆಗಳು ಈ ವಿದ್ಯಮಾನಕ್ಕೆ ಕಾರಣವಾಗಿರಬಹುದು. ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಅಲೆಗಳ ಚಲನೆ ಹಾಗೂ ಸಾವಯವ ಪದಾರ್ಥಗಳ ಮಿಶ್ರಣದಿಂದ ಇಂತಹ ನೈಸರ್ಗಿಕ ನೊರೆ ಉಂಟಾಗುವುದು ಸಾಮಾನ್ಯ. ಆದರೆ, ಮೀನುಗಳ ಸಾಮೂಹಿಕ ಸಾವು ಅಥವಾ ನೀರಿನ ಗುಣಮಟ್ಟದಲ್ಲಿ ಬದಲಾವಣೆ ಕ೦ಡುಬ೦ದರೆ ತಕ್ಷಣವೇ ನೀರಿನ ಮಾದರಿಗಳನ್ನು ಸಂಗ್ರಹಿಸಿ ವೈಜ್ಞಾನಿಕ ಪರೀಕ್ಷೆ ನಡೆಸುವುದು ಅಗತ್ಯ ಎಂದು ಒತ್ತಿ ಹೇಳಿದ್ದಾರೆ. ಈ ಅಪರೂಪದ ದೃಶ್ಯ ಕರಾವಳಿ ನಿವಾಸಿಗಳ ಗಮನ ಸೆಳೆದಿದ್ದು, ನೊರೆಯ ನಿಖರ ಕಾರಣ ಪತ್ತೆಯಾಗುವವರೆಗೆ ಸಾರ್ವಜನಿಕರು ಎಚ್ಚರಿಕೆಯಿಂದ ವರ್ತಿಸಿ ಅನಗತ್ಯವಾಗಿ ಅದರ ಸಂಪರ್ಕವನ್ನು ತಪ್ಪಿಸಿಕೊಳ್ಳುವಂತೆ ತಜ್ಞರು ಮನವಿ ಮಾಡಿದ್ದಾರೆ.










































