ದೆಹಲಿ: ಬಾಂಗ್ಲಾದೇಶದಲ್ಲಿ (Bangladesh) ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ (Hindus) ಮೇಲಿನ ಹಲ್ಲೆ, ದೌರ್ಜನ್ಯ ಮುಂದುವರೆದಿದೆ. ದೀಪು ಚಂದ್ರ ದಾಸ್ (Deepu Chandra Das) ಎಂಬ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ, ಹೀನಾಯವಾಗಿ ಥಳಿಸಿ, ಭೀರಕವಾಗಿ ಹತ್ಯೆ ಮಾಡಿದ್ದಾರೆ. ಈ ಹತ್ಯೆಗೆ ಭಾರತದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಕಾಂಗ್ರೆಸ್ ನಾಯಕಿ, ವಯನಾಡು ಸಂಸದೆ (Wayanad MP) ಪ್ರಿಯಾಂಕಾ ಗಾಂಧಿ (Priyanka Gandhi) ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ. ಮೊದಲ ಬಾರಿಗೆ ಹಿಂದೂಗಳ (Hindu) ಮೇಲಿನ ಹಲ್ಲೆ ಖಂಡಿಸಿರುವ ಕಾಂಗ್ರೆಸ್ ನಾಯಕಿ, ಬಾಂಗ್ಲಾದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ಹಿಂಸಾಚಾರವನ್ನು ಭಾರತ ಸರ್ಕಾರವು ಅರಿತುಕೊಳ್ಳಬೇಕು ಅಂತ ಪ್ರಿಯಾಂಗಾ ಗಾಂಧಿ ಆಗ್ರಹಿಸಿದ್ದಾರೆ.
ದೀಪು ಚಂದ್ರ ದಾಸ್ ಹತ್ಯೆ ಖಂಡಿಸಿದ ಪ್ರಿಯಾಂಕಾ ಗಾಂಧಿಬಾಂಗ್ಲಾದೇಶದಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರನ್ನು ಗುಂಪು ಗುಂಪಾಗಿ ಹತ್ಯೆ ಮಾಡಿದ ಸುದ್ದಿ ತೀವ್ರ ಕಳವಳಕಾರಿಯಾಗಿದೆ ಅಂತ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ. ಧರ್ಮ, ಜಾತಿ, ಗುರುತಿನ ಆಧಾರದ ಮೇಲೆ ತಾರತಮ್ಯ, ಹಿಂಸೆ ಮತ್ತು ಕೊಲೆ ಯಾವುದೇ ನಾಗರಿಕ ಸಮಾಜದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧಗಳಾಗಿವೆ ಅಂತ ಪ್ರಿಯಾಂಕಾ ಖಂಡಿಸಿದ್ದಾರೆ.
ಭಾರತ ಸರ್ಕಾರಕ್ಕೆ ಪ್ರಿಯಾಂಕಾ ಗಾಂಧಿ ಆಗ್ರಹನಮ್ಮ ನೆರೆಯ ದೇಶದಲ್ಲಿ ಹಿಂದೂ, ಕ್ರಿಶ್ಚಿಯನ್ ಮತ್ತು ಬೌದ್ಧ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ಹಿಂಸಾಚಾರವನ್ನು ಭಾರತ ಸರ್ಕಾರವು ಅರಿತುಕೊಳ್ಳಬೇಕು ಅಂತ ಅವರು ಆಗ್ರಹಿಸಿದ್ದಾರೆ. ಅವರ ಸುರಕ್ಷತೆಯ ವಿಷಯವನ್ನು ಬಾಂಗ್ಲಾದೇಶ ಸರ್ಕಾರದೊಂದಿಗೆ ಬಲವಾಗಿ ಎತ್ತಬೇಕು ಅಂತ ಕೇಂದ್ರ ಸರ್ಕಾರಕ್ಕೆ ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.













































