ದೆಹಲಿ: ₹5 ಕೋಟಿ ನಗದು, ₹8.8 ಕೋಟಿ ಮೌಲ್ಯದ ಆಭರಣ ಇ.ಡಿ ವಶಕ್ಕೆ

Picture of Savistara

Savistara

Bureau Report

ನವದೆಹಲಿ: ಸೂಟ್‌ಕೇಸ್‌ ತುಂಬಾ ₹8.80 ಕೋಟಿ ಮೌಲ್ಯದಬಂಗಾರದ ಮತ್ತು ವಜ್ರದ ಆಭರಣಗಳು, ₹5.12 ಕೋಟಿ ನಗದು, ₹35 ಕೋಟಿ ಮೌಲ್ಯದ ಆಸ್ತಿ ಪತ್ರಗಳು, ಬ್ಯಾಗ್ ತುಂಬಾ ಬ್ಯಾಂಕ್‌ನ ಚೆಕ್‌ಬುಕ್‌ಗಳು…

ನಾಪತ್ತೆಯಾಗಿರುವ ಹರಿಯಾಣದ ಕ್ರಿಮಿನಲ್ ಇಂದರ್‌ಜೀತ್ ಸಿಂಗ್ ಯಾದವ್ ಎಂಬುವರ ಮೇಲಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿ ದೆಹಲಿಯ ‘ಸರ್ವಪ್ರಿಯ ವಿಹಾರ’ ಎಂಬ ವಸತಿ ಸಮುಚ್ಚಯದಲ್ಲಿ ಇರುವ ಮನೆಯೊಂದರ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದಾಗ ವಶಕ್ಕೆ ಪಡೆದುಕೊಂಡ ವಸ್ತುಗಳಿವು.ಇಂದರ್‌ಜೀತ್‌ ಅವರ ಅಕ್ರಮಗಳಲ್ಲಿ ಸಹಕಾರ ನೀಡುತ್ತಾರೆ ಎನ್ನಲಾದ ಅಮಾನ್ ಕುಮಾರ್ ಎಂಬುವರಿಗೆ ಸೇರಿದ ಮನೆ ಇದಾಗಿದೆ. ಮಂಗಳವಾರವೇ ಈ ಮನೆಯ ಮೇಲೆ ದಾಳಿ ನಡೆಸಲಾಗಿದೆ. ತನಿಖೆಯು ಬುಧವಾರವೂ ಮುಂದುವರಿದಿದ್ದು, ಹಣ ಎಣಿಸುವ ಯಂತ್ರವನ್ನು ತರಿಸಿಕೊಂಡು ಪರಿಶೀಲನೆಯನ್ನು ಮುಂದುವರಿಸಲಾಗಿದೆ.ಇಂದರ್‌ಜೀತ್‌ ಮತ್ತು ಅವರ ಸಹಚರರ ವಿರುದ್ಧ ಹರಿಯಾಣ ಮತ್ತು ಉತ್ತರ ಪ್ರದೇಶ ಪೊಲೀಸರು ದಾಖಲಿಸಿಕೊಂಡ ಒಟ್ಟು 14 ಎಫ್‌ಐಆರ್‌ಗಳಿಗೆ ಸಂಬಂಧಿಸಿ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿ.26 ಮತ್ತು 27ರಂದು ದೆಹಲಿ, ಗುರುಗ್ರಾಮ ಮತ್ತು ಹರಿಯಾಣದ ರೋಹಟಕ್‌ನಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅಪೋಲೊ ಗ್ರೀನ್ ಎನರ್ಜಿ ಲಿ. ಎಂಬ ಕಂಪನಿಯ ಮೇಲೆಯು ದಾಳಿ ನಡೆಸಲಾಗಿದೆ.

ಹತ್ಯೆ ಕಮಿಷನ್ ಭೂಕಬಳಿಕೆ…

‘ಇಂದರ್‌ಜೀತ್‌ ಯಾದವ್ ಅವರು ತಲೆಮರೆಸಿಕೊಂಡಿದ್ದು ಸದ್ಯ ಯುಎಇಯಿಂದ ಕಾರ್ಯನಿರ್ವಹಿಸುತ್ತಾರೆ’ ಎಂದು ಇ.ಡಿ. ಅಧಿಕಾರಿಗಳು ಹೇಳುತ್ತಾರೆ. ಇಂದರ್‌ಜೀತ್ ಕೊಲೆ ಸುಲಿಗೆ ಖಾಸಗಿ ಫೈನಾನ್ಶಿಯರ್‌ಗಳಿಂದ ಸಾಲು ಕೊಡಿಸುವುದು ಮತ್ತು ಸಾಲ ಮರುಪಾವತಿ ಮಾಡಿಸಿಕೊಡುವುದು ಭೂಕಬಳಿಕೆ ವಂಚನೆಯೂ ಸೇರಿ ಹಲವು ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಜೆಮ್ ರೆಕಾರ್ಡ್ಸ್ ಎಂಟರ್‌ಟೈನ್ಸೆಂಟ್ ಪ್ರೈ.ಲಿ. ಎಂಬ ಕಂಪನಿಯನ್ನು ಇವರು ನಡೆಸುತ್ತಿದ್ದಾರೆ. ಹರಿಯಾಣದ ಡಿಘಲ್ ಮತ್ತು ಝಾಝರ್ ಎಂಬ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಖಾಸಗಿ ಫೈನಾನ್ಶಿಯರ್‌ಗಳಿಂದ ಅಪೋಲೊ ಗ್ರೀನ್ ಎನರ್ಜಿ ಲಿ. ಕಂಪನಿ ಸೇರಿದಂತೆ ಹಲವು ಕಂಪನಿಗಳು ನಗದು ಮೂಲಕ ನೂರಾರು ಕೋಟಿ ಮೊತ್ತದ ಹಣವನ್ನು ಸಾಲ ಪಡೆಯಲು ಇವರು ಸಹಕಾರ ನೀಡುತ್ತಾರೆ. ಫೈನಾನ್ಶಿಯರ್ ಪರವಾಗಿ ಸಾಲ ಪಡೆದವರನ್ನು ಶಸ್ತ್ರಾಸ್ತ್ರ ಮೂಲಕ ಬೆದರಿಸಿ ರೌಡಿ ಗ್ಯಾಂಗ್‌ಗಳ ಮೂಲಕ ಹೆದರಿಸಿ ಸಾಲ ಮರುಪಾವತಿಯನ್ನೂ ಇಂದರ್‌ಜೀತ್ ಮಾಡಿಸಿಕೊಡುತ್ತಾರೆ. ಈ ಎರಡೂ ಅಕ್ರಮಗಳಿಂದ ಇವರು ದೊಡ್ಡ ಮೊತ್ತದ ಕಮಿಷನ್ ಪಡೆದುಕೊಳ್ಳುತ್ತಾರೆ.

ಐಷಾರಾಮಿ ಜೀವನ

* ನಗದು ರೂಪದಲ್ಲಿ ಸಾಲ ಕೊಡಿಸಿಕೊಡುವ ದಂಧೆ ಮೂಲಕವೇ ಇಂದರ್‌ಜೀತ್ ಅವರು ನೂರಾರು ಕೋಟಿ ಹಣ ಸಂಪಾದಿಸುತ್ತಾರೆ. ಬಂದ ಹಣದಿಂದ ಚಿರಾಸ್ತಿ ಖರೀದಿ ಕಾರುಗಳ ಖರೀದಿ ಸೇರಿದಂತೆ ಐಷಾರಾಮಿ ಜೀವನ ನಡೆಸುತ್ತಾರೆ. ಆದರೆ ಸರ್ಕಾರಕ್ಕೆ ಕಡಿಮೆ ಆದಾಯ ಇರುವ ಬಗ್ಗೆ ದಾಖಲಾತಿ ತೋರಿಸುತ್ತಾರೆ

* ಕೆಲವು ದಿನಗಳ ಹಿಂದೆ ನಡೆಸಿದ್ದ ದಾಳಿಯ ವೇಳೆ ₹17 ಲಕ್ಷ ನಗದು ಐದು ಹೈಎಂಡ್ ಕಾರುಗಳನ್ನು ಇ.ಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಕೆಲವು ಬ್ಯಾಂಕ್ ಖಾತೆಗಳನ್ನು ರದ್ದು ಪಡಿಸಲಾಗಿತ್ತು

* ಇದೇ ವೇಳೆ ಕಂಪನಿಗಳು ಮತ್ತು ಖಾಸಗಿ ಫೈನಾನ್ಶಿಯರ್‌ಗಳ ಮಧ್ಯೆ ಸಾಲದ ವ್ಯವಹಾರ ಮಾಡಿಸಿಕೊಡಲು ಇಂದ್ರಜಿತ್ ಅವರು ವೆಬ್ ಪೋರ್ಟಲ್‌ವೊಂದನ್ನು ಅಭಿವೃದ್ಧಿ ಪಡಿಸಿ ಬಳಸುತ್ತಿದ್ದರು ಎಂದೂ ತಿಳಿದುಬಂದಿತ್ತು

[t4b-ticker]
error: Content is protected !!