ದಾವಣಗೆರೆ : ಹಿರಿಯ ಮುತ್ಸದ್ದಿ ಮತ್ತು ಲಿಂಗಾಯತ ಸಮುದಾಯದ ಪ್ರಬಾವಿ ನಾಯಕ ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ ತೆರವಾದ ಅಸೆಂಬ್ಲಿ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎನ್ನುವ ಚರ್ಚೆ ಬಿಜೆಪಿಯಲ್ಲಿ ಜೋರಾಗಿ ನಡೆಯಲು ಆರಂಭವಾಗಿದೆ. ಆಗಲೇ, ಲಾಬಿಗಳು ಶುರುವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಮಧ್ಯ ಕರ್ನಾಟಕ ಭಾಗದ ವರ್ಚಸ್ವೀ ನಾಯಕ ಮತ್ತು ದಾವಣಗೆರೆಯಲ್ಲಿ ’ಧಣಿ’ ಎಂದೇ ಹೆಸರು ಪಡೆದಿದ್ದ ಶಾಮನೂರು ಅವರು ಡಿಸೆಂಬರ್ 14, 2025ರಂದು ನಿಧನರಾಗಿದ್ದರು. ಹಾಗಾಗಿ, ಅವರು ಪ್ರತಿನಿಧಿಸುತ್ತಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಬೇಕಿದೆ.
ಮಾರ್ಚ್ ನಿಂದ ಮೇ ತಿಂಗಳ ಅವಧಿಯಲ್ಲಿ, ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ವೇಳೆ, ಕರ್ನಾಟಕದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಬಾಗಲಕೋಟೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಎಚ್.ವೈ.ಮೇಟಿ ಕೂಡಾ ಇತ್ತೀಚೆಗೆ ನಿಧನ ಹೊಂದಿದ್ದರು.
ಲಿಂಗಾಯತ ಮತಬ್ಯಾಂಕ್ ನಿರ್ಣಾಯಕವಾಗಿರುವ ದಾವಣಗೆರೆಯಲ್ಲಿನ ರಾಜಕೀಯ ರಾಜ್ಯದ ಇತರ ಕ್ಷೇತ್ರಗಳಿಗಿಂತ ವಿಭಿನ್ನ. ಇಲ್ಲಿ, ಹಲವು ವರ್ಷಗಳಿಂದ ಕುಟುಂಬ ರಾಜಕೀಯವೇ ಮೇಲುಗೈ ಸಾಧಿಸುತ್ತಾ ಬರುತ್ತಿದೆ. ಶಾಮನೂರು ಮತ್ತು ಜಿಎಂ ಸಿದ್ದೇಶ್ವರ ಕುಟುಂಬದ ನಡುವೆ ಯಾವಾಗಲೂ ಜಿದ್ದಾಜಿದ್ದಿನ ಪೈಪೋಟಿ. ಹೀಗಾಗಿ, ಉಪಚುನಾವಣೆ ಸಾಕಷ್ತು ಕುತೂಹಲಕ್ಕೆ ಕಾರಣವಾಗಿದೆ.













































