ನವದೆಹಲಿ: ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕಾರ್ಯಾಧ್ಯಕ್ಷ ನಿತಿನ್ ನಬಿನ್(Nitin Nabin) ಇಂದು(ಜ. 19) ಸಂಜೆ ನಾಮಪತ್ರ ಸಲ್ಲಿಸಿದ್ದು, ನಾಳೆ ಅವರು ಅವಿರೋಧವಾಗಿ ಪಕ್ಷದ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ಅವರಿಗೆ ನಿತಿನ್ ನಬಿನ್ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ಹಾಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ನಿತಿನ್ ಗಡ್ಕರಿ, ಕಿರಣ್ ರಿಜಿಜು ಸೇರಿ ಹಲವು ನಾಯಕರು ಸಾಥ್ ನೀಡಿದ್ದಾರೆ. ಪ್ರಧಾನಿ ಮೋದಿ ಸೇರಿ ಎಲ್ಲರೂ ಅವರ ಉಮೇದುವಾರಿಕೆಯನ್ನು ಬೆಂಬಲಿಸಿದ್ದಾರೆ.ಕಳೆದ ಡಿಸೆಂಬರ್ ಆರಂಭದಲ್ಲಿ ಪಕ್ಷದ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕವಾಗಿದ್ದ 46 ವರ್ಷದ ನಿತಿನ್ ನಬಿನ್, ನಾಳೆ ನಡೆಯುವ ಔಪಚಾರಿಕ ಚುನಾವಣಾ ಪ್ರಕ್ರಿಯೆ ಬಳಿಕ ಅವಿರೋಧವಾಗಿ ಬಿಜೆಪಿ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಬಿಜೆಪಿ ಸಂವಿಧಾನದ ಪ್ರಕಾರ, ಪಕ್ಷದ ಅಧ್ಯಕ್ಷರನ್ನು ರಾಷ್ಟ್ರೀಯ ಮತ್ತು ರಾಜ್ಯ ಮಂಡಳಿಗಳ ಸದಸ್ಯರನ್ನು ಒಳಗೊಂಡ ಚುನಾವಣಾ ಕಾಲೇಜಿನಿಂದ ಆಯ್ಕೆ ಮಾಡಲಾಗುತ್ತದೆ. ಒಂದೇ ಒಂದು ನಾಮಪತ್ರ ಸಲ್ಲಿಸಿದರೆ, ಮತದಾನವಿಲ್ಲದೆ ಅಭ್ಯರ್ಥಿಯನ್ನು ಚುನಾಯಿತ ಎಂದು ಘೋಷಿಸಲಾಗುತ್ತದೆ.ನಾಳೆ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳ ಸಿಎಂಗಳು, ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಪದಾಧಿಕಾರಿಗಳನ್ನು ದೆಹಲಿಯಲ್ಲಿರುವಂತೆ ಕೇಳಿಕೊಳ್ಳಲಾಗಿದೆ. ಬಿಜೆಪಿಯ ಮುಖ್ಯ ಚುನಾವಣಾ ಅಧಿಕಾರಿ ಕೆ. ಲಕ್ಷ್ಮಣ್ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರ ಹೆಸರನ್ನು ಘೋಷಿಸಲಿದ್ದಾರೆ ಎನ್ನಲಾಗಿದೆ.
ಯಾರು ಈ ನಿತಿನ್ ನಬಿನ್
ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿರುವ ನಿತಿನ್ ನಬಿನ್ ಬಿಹಾರ ವಿಧಾನಸಭೆಗೆ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಪಾಟ್ನಾದ ಬಂಕಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ದಿವಂಗತ ಬಿಜೆಪಿ ಹಿರಿಯ ಮತ್ತು ಮಾಜಿ ಶಾಸಕ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರರಾಗಿದ್ದಾರೆ. ಸಂಘಟನೆಯೊಳಗೆ, ನಬಿನ್ ಅವರನ್ನು ಸೈದ್ಧಾಂತಿಕವಾಗಿ ಬೇರೂರಿರುವ ಮತ್ತು ಪಕ್ಷದ ರಚನೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ವ್ಯಕ್ತಿಯಾಗಿ ನೋಡಲಾಗುತ್ತದೆ. ಕಳೆದ 2025 ಡಿ. 14ರಂದು ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು












































