ಬೆಂಗಳೂರು: ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತಭಾಷೆಯಾಗಿ ಘೋಷಿಸುವುದಕ್ಕೆ ಸಂಬಂಧಿಸಿದಂತೆ ಬುಧವಾರ ವಿಧಾನಸಭೆಯಲ್ಲಿ ಕರಾವಳಿ ಭಾಗದ ಶಾಸಕರು ಪಕ್ಷಭೇದ ಮರೆತು ಧ್ವನಿ ಎತ್ತಿದರು.ಬುಧವಾರ ಪ್ರಶೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕ ಅಶೋಕ್ ರೈ, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಹೆಚ್ಚುವರಿ ಭಾಷೆಗಳನ್ನು ಆಯಾ ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಿದ್ದು, ಕರ್ನಾಟಕದಲ್ಲಿ ತುಳು ಭಾಷೆಯನ್ನೂ ಅದೇ ರೀತಿ ಘೋಷಿಸಬೇಕು ಎಂದು ಆಗ್ರಹಿಸಿದರು.ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆ ಎಂದು ಘೋಷಿಸುವುದರಿಂದ ಯಾವುದೇ ಹಣಕಾಸಿನ ಹೆಚ್ಚುವರಿ ಆಗುವುದಿಲ್ಲ. ಯಾರ ವಿರೋಧ, ಆಕ್ಷೇಪಗಳೂ ಇಲ್ಲ. ಆದರೂ ರಾಜ್ಯ ಸರ್ಕಾರ ಏಕೆ ಘೋಷಣೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯುವ ಸಂದರ್ಭದಲ್ಲಿ ಈ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ವೇದವ್ಯಾಸ ಕಾಮತ್, ಡಾ. ಮೋಹನ್ ಆಳ್ವ ಅವರು 2023ರಲ್ಲೇ ತುಳು ಭಾಷೆಯ ಸ್ವರೂಪ, ಇತಿಹಾಸ, ಪರಂಪರೆ, ಲಿಪಿ, ಸಾಹಿತ್ಯ ಎಲ್ಲದರ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಿದೆ. ಅದನ್ನಾದರೂ ಜಾರಿಗೆ ತನ್ನಿ ಎಂದು ತುಳುವಿನಲ್ಲೇ ಆಗ್ರಹಿಸಿದರು. ಇದಕ್ಕೆ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಕೂಡ ಧ್ವನಿಗೂಡಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಡಾ.ಮೋಹನ್ ಆಳ್ವ ಅಧ್ಯಕ್ಷತೆಯ ಸಮಿತಿಯು ಅಧ್ಯಯನ ನಡೆಸಿ 2023ರ ಫೆ.14ರಂದೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಈ ಕುರಿತು ಕಾನೂನು ಇಲಾಖೆಯ ಅಭಿಪ್ರಾಯ ಪಡೆದುಕೊಳ್ಳಲಾಗಿದೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಅಧಿಕೃತ ಆಡಳಿತ ಭಾಷೆಯಾಗಿದೆ. ಅದೇ ರೀತಿ ಇಂಗ್ಲಿಷ್ ಹೆಚ್ಚುವರಿ ಆಡಳಿತ ಭಾಷೆಯಾಗಿರುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಸಮಿತಿಯು ಆಂಧ್ರಪ್ರದೇಶಕ್ಕೆ ಭೇಟಿ ನೀಡಿದೆ.ಅಲ್ಲಿ ಉರ್ದು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಲು ಅನುಸರಿಸುವ ಮಾನದಂಡಗಳ ಕುರಿತು ಅಧ್ಯಯನ ನಡೆಸಿದ್ದು, ವರದಿ ಸಲ್ಲಿಸಿದ ಬಳಿಕ ವಿಧಾನಸಭಾಧ್ಯಕ್ಷರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕರಾವಳಿ ಭಾಗದ ಶಾಸಕರ ಸಭೆ ಕರೆದು ಈ ಬಗ್ಗೆ ನಿರ್ಣಯಿಸುವುದಾಗಿ ತಿಳಿಸಿದರು.
ಲಂಬಾಣಿಗೂ ಸ್ಥಾನಮಾನಕ್ಕೆ ಉಪಸಭಾಧ್ಯಕ್ಷರ ಆಗ್ರಹ ಇದೇ ವೇಳೆ ಎದ್ದು ನಿಂತ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ತುಳು ಮಾತ್ರವಲ್ಲದೆ, ಲಂಬಾಣಿ ಭಾಷೆಯನ್ನೂ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಎನ್ನುವ ಬೇಡಿಕೆ ಇದೆ. ಇದಕ್ಕಾಗಿ ಹಂ.ಪ. ನಾಗರಾಜಯ್ಯ ಸಮಿತಿ ವರದಿ ಕೊಟ್ಟಿದ್ದು, ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿಯೂ ಇದನ್ನು ಅಳವಡಿಸಬೇಕೆಂದು ಒತ್ತಾಯಿಸಿದರು. ಇದಕ್ಕೂ ಪ್ರತ್ಯೇಕ ಸಭೆ ಕರೆಯುವುದಾಗಿ ಸಚಿವ ತಂಗಡಗಿ ಉತ್ತರಿಸಿದರು.












































