
ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ ಸರ್ಕಾರದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಕೇವಲ ಆರ್ಥಿಕ ಪತ್ರವಲ್ಲ, ಅದು ‘ವಿಕಸಿತ ಭಾರತ-2047’ರ ಗುರಿ ತಲುಪುವ ನಿಟ್ಟಿನಲ್ಲಿ ದೇಶದ ಅಭಿವೃದ್ಧಿಯ ಪಯಣಕ್ಕೆ ವೇಗ ನೀಡಿದ ಬಜೆಟ್! ಜಾಗತಿಕ ಆರ್ಥಿಕ ಏರಿಳಿತಗಳ ನಡುವೆಯೂ ಭಾರತದ ಆರ್ಥಿಕತೆಯನ್ನು ಸದೃಢವಾಗಿ ಮುನ್ನಡೆಸುತ್ತಿರುವ ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್, ದೇಶದ ಪ್ರತಿಯೊಬ್ಬ ಪ್ರಜೆಯ ಆಶೋತ್ತರಗಳನ್ನು ಈಡೇರಿಸುವ ವಿಶ್ವಾಸ ಮೂಡಿಸಿದೆ. ಇದು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪ್ರಧಾನಿ ಮೋದಿ ಸರ್ಕಾರದ ದೂರದರ್ಶಿತ್ವದ ದಿಕ್ಸೂಚಿಯಾಗಿದೆ.
ಯುವಶಕ್ತಿ, ಮೂಲಸೌಕರ್ಯ ಮತ್ತು ಕೃಷಿಗೆ ಆದ್ಯತೆ ನೀಡಲಾಗಿದ್ದು, ಈ ಬಜೆಟ್‌ನಲ್ಲಿ ನಮ್ಮ ದೇಶದ ಬೆನ್ನೆಲುಬಾದ ಅನ್ನದಾತ ರೈತರಿಗೆ, ದೇಶದ ಶಕ್ತಿಯಾದ ಯುವಜನತೆಗೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಿರುವುದು ಸ್ತುತ್ಯರ್ಹ. ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ನೀಡಲಾಗಿರುವ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆ, ರಾಜ್ಯದ ಅದರಲ್ಲೂ ನಮ್ಮ ಮಲೆನಾಡು ಭಾಗದ ರೈತರಿಗೆ ಅನುಕೂಲವಾಗುವಂತೆ ತೆಂಗು, ಗೋಡಂಬಿ ಬೆಳೆಗಾರರಿಗೆ ವಿಶೇಷ ಬೆಂಬಲ ಯೋಜನೆಗಳನ್ನು ಘೋಷಿಸಲಾಗಿದೆ.
ಮುಖ್ಯವಾಗಿ ರೈಲ್ವೆ, ಹೆದ್ದಾರಿ ಮತ್ತು ಡಿಜಿಟಲ್ ಮೂಲಸೌಕರ್ಯದ ಮೇಲಿನ ಹೂಡಿಕೆ, ಉತ್ಪಾದನಾ ವಲಯಕ್ಕೆ ಹೊಸ ಚೈತನ್ಯ ನೀಡಲಿದ್ದು, ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗುರಿಯತ್ತ ವೇಗವಾಗಿ ಕೊಂಡೊಯ್ಯಲಿದೆ. ಮುಖ್ಯವಾಗಿ ವಿತ್ತ ಸಚಿವರು ಘೋಷಿಸಿರುವ 7 ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗಳಲ್ಲಿ 2 – ಹೈದರಾಬಾದ್-ಬೆಂಗಳೂರು ಮತ್ತು ಚೆನ್ನೈ-ಬೆಂಗಳೂರು ಕಾರಿಡಾರ್‌ಗಳು – ರಾಜ್ಯದ ಆರ್ಥಿಕ ಚಿತ್ರಣವನ್ನೇ ಬದಲಿಸಲಿವೆ. ಆರೋಗ್ಯ ಸೇವಾಕ್ಷೇತ್ರದಲ್ಲಿ “ಆರೈಕೆ ವ್ಯವಸ್ಥೆ” ನಿರ್ಮಿಸಲು ಮಹತ್ವಪೂರ್ಣ ಉಪಕ್ರಮಘೋಷಿಸಲಾಗಿದ್ದು, ಕುಟುಂಬಗಳನ್ನು ಮತ್ತು ವಿಶೇಷವಾಗಿ ವೃದ್ಧರ ಆರೈಕೆಗೆ 1.5 ಲಕ್ಷ ಬಹು ಕೌಶಲ್ಯದ ಆರೈಕೆದಾರರಿಗೆ ತರಬೇತಿ ನೀಡಲಾಗುವುದು.
ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ 17 ನಿರ್ದಿಷ್ಟ ಕ್ಯಾನ್ಸರ್ ಔಷಧಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ಘೋಷಿಸಲಾಗಿದೆ. ಹಾಗೆಯೆ, ಉನ್ನತ ಶಿಕ್ಷಣದಲ್ಲಿ ಮಹಿಳಾ ವಿದ್ಯಾರ್ಥಿನಿಯರಿಗೆ ಬೆಂಬಲ ನೀಡಲು, ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ಹಾಸ್ಟೆಲ್ ಗಳ ನಿರ್ಮಾಣ, ನಮ್ಮ ಮೀನುಗಾರರಿಗೆ ನೆರವಾಗಲು ನಮ್ಮ ಸಮುದ್ರಗಳಲ್ಲಿ ಭಾರತೀಯ ಹಡಗುಗಳು ಹಿಡಿಯುವ ಮೀನುಗಳಿಗೂ ಕೂಡ ಸುಂಕ ಮುಕ್ತ ಮಾಡಲಾಗಿದೆ. ಮುಖ್ಯವಾಗಿ, ಕೇಂದ್ರ ಸರ್ಕಾರ ತೆರಿಗೆ ನಿಯಮಗಳನ್ನು ಮತ್ತಷ್ಟು ಸರಳೀಕರಣಗೊಳಿಸುತ್ತಿದ್ದು, ಉದಾಹರಣೆಗೆ ತೆರಿಗೆ ರಿಟರ್ನ್ ದೋಷಗಳನ್ನು ಸರಿಪಡಿಸುವ ಸಮಯದ ವಿಸ್ತರಣೆ ಮತ್ತು ವಿದೇಶಿ ಪ್ರವಾಸ ಪ್ಯಾಕೇಜ್‌ಗಳ ಮೇಲಿನ ತೆರಿಗೆ ದರಗಳನ್ನು ಕೇವಲ 2% ಕ್ಕೆ ಇಳಿಕೆ ಮಾಡಲಾಗಿದೆ
ಪ್ರಮುಖವಾಗಿ ಮಧ್ಯಮ ವರ್ಗದ ಹಿತರಕ್ಷಣೆ ಮತ್ತು ವಿಕಸಿತ ಭಾರತದ ಸಂಕಲ್ಪದ ಸಕಾರದ ನಿಟ್ಟಿನಲ್ಲಿ ಮಧ್ಯಮ ವರ್ಗದ ಹಿತರಕ್ಷಣೆ ಮತ್ತು ತೆರಿಗೆ ಸುಧಾರಣೆಯ ವಿಚಾರದಲ್ಲಿ ಮೋದಿ ಸರ್ಕಾರ ಕೈಗೊಂಡಿರುವ ನಿರ್ಧಾರಗಳು ಜನಸಾಮಾನ್ಯರ ಆರ್ಥಿಕ ಹೊರೆಯನ್ನು ತಗ್ಗಿಸಲಿವೆ. ವಿಶೇಷವಾಗಿ ಸಾರಿಗೆ ವಲಯಕ್ಕೆ 5,98,520 ಕೋಟಿ ರೂ, ಗ್ರಾಮೀಣಾಭಿವೃದ್ಧಿಗೆ 2,73,108 ಕೋಟಿ ರೂ, ಶಿಕ್ಷಣಕ್ಕೆ 1,39,289 ಕೋಟಿ ರೂ, ಆರೋಗ್ಯ ವಲಯಕ್ಕೆ 1,04,599 ಕೋಟಿ ರೂ, ಆಯಾ ವಲಯಗಳ ಪರಿವರ್ತನೆಗೆ ನಾಂದಿ ಹಾಡಲಿದೆ
ಭಾರತವನ್ನು ಜಾಗತಿಕ ಉತ್ಪಾದನಾ ಹಬ್ ಆಗಿ ಮಾಡಲು ಕೈಗೊಂಡಿರುವ ಕ್ರಮಗಳು ಆತ್ಮನಿರ್ಭರ ಭಾರತದ ಕನಸನ್ನು ಸಾಕಾರಗೊಳಿಸಲಿವೆ. ಕೇವಲ ಅಂಕಿ-ಅಂಶಗಳಿಗೆ ಸೀಮಿತವಾಗದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ‘ಅಂತ್ಯೋದಯ’ ತತ್ವದಡಿ ಈ ಬಜೆಟ್ ರೂಪಿಸಲಾಗಿದೆ. ಇದು ದೇಶದ ಪ್ರತಿ ಕ್ಷೇತ್ರದಲ್ಲೂ ಅಮೂಲಾಗ್ರ ಬದಲಾವಣೆ ತರಲಿದೆ ಎಂಬ ವಿಶ್ವಾಸ ನನಗಿದೆ.
ಒಟ್ಟಾರೆಯಾಗಿ, 2026-27ರ ಬಜೆಟ್ ವಿಕಸಿತ ಭಾರತದ ನಿರ್ಮಾಣದ ಸಂಕಲ್ಪವನ್ನು ಪುನರುಚ್ಚರಿಸಿದೆ. ದೇಶದ ಆರ್ಥಿಕತೆಯನ್ನು ವಿಶ್ವದ ಅಗ್ರಮಾನ್ಯ ಸ್ಥಾನಕ್ಕೆ ಏರಿಸುವ ಬದ್ಧತೆ ಜೊತೆಗೆ 1.4 ಬಿಲಿಯನ್ ಭಾರತೀಯರ ಆಶೋತ್ತರಗಳನ್ನು ಈ ಬಜೆಟ್ ಪ್ರತಿಬಿಂಬಿಸುತ್ತಿದೆ. ಈ ಬಜೆಟ್ ಸರ್ವಸ್ಪರ್ಶಿಯಾಗಿದ್ದು, ಆದರಣೀಯ ಪ್ರಧಾನಿ ನರೇಂದ್ರ ಮೋದಿ ಜೀ ಸರ್ಕಾರದ ದೂರದರ್ಶಿತ್ವಕ್ಕೆ ಸಾಕ್ಷಿಯಾಗಿದೆ. ಇದಕ್ಕಾಗಿ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಮತ್ತು ವಿತ್ತ ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್ ರ ವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.










































