ಹಿಂದೂ ಸಂಗಮ ಸಂಪಾಜೆ ಮಂಡಲದ ಕೊಡಗು ಸಂಪಾಜೆ, ಕಲ್ಲುಗುಂಡಿ, ಚೆಂಬು, ಗ್ರಾಮದ ವತಿಯಿಂದ ಹಿಂದು ಸಮಾಜದ ಏಕತೆ (ಸಾಮರಸ್ಯ), ಸಾಮಾಜಿಕ ಪರಿವರ್ತನೆ, ಧಾರ್ಮಿಕ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಬೃಹತ್ ಹಿಂದೂ ಸಂಗಮ ಹಾಗೂ ಶೋಭಾಯಾತ್ರೆ ಕಾರ್ಯಕ್ರಮ ಕಲ್ಲುಗುಂಡಿ ಮಹಾವಿಷ್ಣು ಮೂರ್ತಿ ಒತ್ತೆ ಕೋಲ ಗದ್ದೆಯಲ್ಲಿ ಫೆ. 1 ರಂದು ನಡೆಯಿತು.
ಅಪರಾಹ್ನ 2: 30 ಕ್ಕೆ ಕಲ್ಲುಗುಂಡಿಯ ಕೆಳಗಿನ ಪೇಟೆಯ ಕೂಲಿ ಶೆಡ್ ನಲ್ಲಿ ತೆಂಗಿನ ಕಾಯಿ ಹೊಡೆಯುವ ಮೂಲಕ ಜಾಥಾಕ್ಕೆ ಚಾಲನೆಗೊಂಡಿತು. ಬಳಿಕ ಪುಪ್ಪಾಲಂಕೃತಗೊಂಡ ಭವ್ಯ ಭಾರತ ಮಾತೆಯ ರಥದೊಂದಿಗೆ, ಭಾರತ್ ಮಾತಾಕಿ ಜೈ, ಶ್ರೀ ರಾಮ ಚಂದ್ರ ಮಹಾರಾಜ ಕಿ ಜೈ, ವಂದೇ ಮಾತರಂ, ನಾವೆಲ್ಲ ಹಿಂದೂ ನಾವೆಲ್ಲ ಬಂದು ಮೊದಲಾದ ಧನಾತ್ಮಕ ಘೋಷಣೆಗಳಿಂದ ಮಹಿಳಾ ಮಾತೆಯರಿಂದ ಕಲಶ ಕುಂಭ, ಶಂಖವಾದ್ಯ, ಪುಟಾಣಿ ಮಕ್ಕಳ ಪೌರಾಣಿಕ ವೇಷ, ಕುಣಿತ ಭಜನೆ, ಕೊಡಗು ವಾದ್ಯ, ಗೊಂಬೆಯಾಟ , ನಾಸಿಕ್ ಬ್ಯಾಂಡ್ ಹಾಗೂ ವಾದ್ಯ ಘೋಷಗಳೊಂದಿಗೆ ಮೂಲಕ ಬೃಹತ್ ಶೋಭಾಯಾತ್ರೆಯು ಕಲ್ಲುಗುಂಡಿಯ ಒತ್ತೆಕೋಲ ಗದ್ದೆಗೆ ಸಾಗಿಬಂದಿತು . ಬಳಿಕ ಸಭಾಕಾರ್ಯಕ್ರಮದ ವೇದಿಕೆಯಲ್ಲಿ ಸ್ಥಳೀಯರಿಂದ ದೇಶದ ಮಹಿಮೆಯ ಸಾರುವ ನೃತ್ಯ ಪ್ರದರ್ಶನ, ಹಾಗೂ ಯಕ್ಷಗಾನ ಪ್ರಸಂಗ ನಡೆಯಿತು.ಬಳಿಕ ಸಭೆಯಲ್ಲಿ ಆಗಮಿಸಿದ ಅತಿಥಿಗಳಿಂದ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕೃಷ್ಣಪದಾಸ್ ಶಂಖನಾದ ಮೊಳಗಿಸಿದರು. ಬಳಿಕ ಇತ್ತೀಚಿಗೆ ಅಗಲಿದ ಹಿಂದೂ ನಾಯಕರಿಗೆ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಸುಳ್ಯ ತಾಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಎಂ. ಬಿ ಸದಾಶಿವ ದೀಪ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಸಂಪಾಜೆ ಮಂಡಲ ಸಂಯೋಜಕರಾದ ಅನಂತ ಎನ್. ಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸರ್ವರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ರಾಷ್ಟ್ರೀಯ ಸ್ವಯಂ ಸೇವಾ ಗ್ರಾಮ ವಿಕಾಸದ ಸಂಯೋಜಕರಾದ ಹಾಗೂ ದಿಕ್ಕೂಚಿ ಭಾಷಣಗಾರಾಗಿ ಆಗಮಿಸಿದ ಜಿತೇಂದ್ರ ಅವರು ಮಾತನಾಡಿ ” ಹಿಂದೂ ಸಂಘಟನೆ ಬಲಿಷ್ಠವಾಗಬೇಕಾದರೆ ಮೊದಲು ನಾವು ನಮ್ಮ ಕುಟುಂಬ, ದೇಶ, ಗ್ರಾಮ, ಊರು, ನಾನು ಹೇಗಿರಬೇಕು, ನಮ್ಮ ಜೀವನದ ಪರಿವರ್ತನೆ ಹೇಗಿರಬೇಕು ಎಂಬ ಚಿಂತನೆಗೋಸ್ಕರ ನಾವೆಲ್ಲ ಇಂದು ಒಟ್ಟಾಗಿ ಸೇರಬೇಕಿದೆ. ಮುಂದಿನ ನಮ್ಮ ದೇಶದ ಉನ್ನತಿಗಾಗಿ ಹೋರಾಡುವ ಹಾಗೂ ಹಿಂದುತ್ವವನ್ನು ಉಳಿಸುವ ಕಾರ್ಯವನ್ನು ಯುವ ಜನತೆ ಮಾಡಬೇಕಿದೆ” ಎಂದು ಹೇಳಿದರು.
ಎಂ. ಬಿ ಸದಾಶಿವ ಅವರು ಮಾತನಾಡಿ ” ಹಿಂದೂ ಸಂಘಟನೆಗೆ ಬಲವಿದೆ ಎಂದು ಇಂದಿನ ಸಂಪಾಜೆ ಹಿಂದೂ ಸಂಗಮ ಸಾಕ್ಷಿಯಾಗಿದೆ. ಯಾವುದೇ ಬೇಧ, ಭಾವ, ಶ್ರೀಮಂತ ಬಡವ ಎಂಬ ಭೇದವನ್ನು ನೋಡದೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಂದು ಸೇರಿ ಹಿಂದೂ ಧರ್ಮದಲ್ಲಿ ಬಲವಿದೆ ಎಂದು ತೋರಿಸಿಕೊಟ್ಟಿದ್ದೀರಿ.ಇದು ದೇಶ, ಜಿಲ್ಲೆ ಗ್ರಾಮಕ್ಕೆ ಮಾದರಿಯಾಗಿದೆ ” ಹೇಳಿದರು.
ವೇದಿಕೆಯಲ್ಲಿ ನಿವೃತ್ತ ಕನ್ನಡ ಉಪನ್ಯಾಸಕರಾದ ಕರುಣಾಕರ ನಿಡಿಂಜಿ, ನಿವೃತ್ತ ಸೈನಿಕ ಜಗದೀಶ್ ಕೆ . ಪಿ, ನಿವತ್ತ ಶಿಕ್ಷಕರಾದ ಕೆ.ಆರ್ ವಿಠಲ ಮಾಸ್ತರ್, ಶ್ರೀಮತಿ ಗೌರಮ್ಮ ದೋಳ ಮನೆ, ಸುಬ್ರಹ್ಮಣ್ಯ ಉಪಾಧ್ಯಾಯ, ಕೊರಗಪ್ಪ ಅರಮನೆ ತೋಟ, ಎಸ್. ಪಿ ಲೋಕನಾಥ್, ಹಾಗೂ ಸಂಪಾಜೆ ಹಿಂದೂ ಸಂಗಮ ನಿರ್ವಹಣಾ ಹಾಗೂ ಆಯೋಜನಾ ಸಮಿತಿಯ ಉಪಾಧ್ಯಕ್ಷರು ಸಂಚಾಲಕರು, ಸರ್ವ ಸದಸ್ಯರು, ಊರಿನ ಹಿಂದೂ ನಾಗರಿಕರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಅನಂತ ಎನ್. ಸಿ ಸರ್ವರನ್ನು ಸ್ವಾಗತಿಸಿ, ಕೊಡಗು ಸಂಪಾಜೆ ಮಂಡಲ ಸಂಯೋಜಕರಾದ ರಮಾದೇವಿ ಬಾಲಚಂದ್ರ ಕಳಗಿ ವಂದಿಸಿ, ವಿಕ್ರಾಂತ್ ಸಂಪಾಜೆ ಕಾರ್ಯಕ್ರಮ ನಿರೂಪಿಸಿದರು.ಹಾಗೂ ಸಂಪಾಜೆ ಮಂಡಲ ಕಾರ್ಯಕರ್ತರು ವಿಶೇಷವಾಗಿ ರಸ್ತೆಯುದ್ದಕ್ಕೂ ಕೇಸರಿ ತೋರಣಗಳಿಂದ ಶೃಂಗಾರ ಮಾಡಲಾಗಿತ್ತು.ಆಗಮಿಸಿದ ಎಲ್ಲಾ ಹಿಂದೂ ನಾಗರಿಕರಿಗೆ ಪಾದಯಾತ್ರೆಯಲ್ಲಿ ನೀರಿನ ವ್ಯವಸ್ಥೆ ಹಾಗೂ ಮಾಲ್ಟ್, ಪಲಾವು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.









































