ಬೆಂಗಳೂರು: ಸಹಕಾರಿ ಸಂಘದಲ್ಲಿ ಹೂಡಿಕೆದಾರರಕೋಟ್ಯಂತರ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ, ಸಂಘದ ನಿರ್ದೇಶಕರೊಬ್ಬರ ವೈಯಕ್ತಿಕ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.ಹೊಸಪೇಟೆಯ ಅಹನಾ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕರಲ್ಲಿ ಒಬ್ಬರಾಗಿರುವ ಡಾ. ವಿಶ್ವನಾಥ ಭೀಮಶಂಕರ ದೀಪಾಲಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನು ಸಿವರಾಮನ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ.
ಠೇವಣಿದಾರರಿಂದ ಸಂಗ್ರಹಿಸಿದ್ದ ಹಣ ದುರುಪಯೋಗ ಆರೋಪದಲ್ಲಿ ಸಂಘದ ನಿರ್ದೇಶಕರ ವಿರುದ್ಧ 2021ರ ಏಪ್ರಿಲ್‌ನಲ್ಲಿ ಪ್ರಕರಣದ ದಾಖಲಾಗಿತ್ತು. ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ (ಕೆಪಿಐಡಿಎಫ್‌ಇ) ಅಡಿಯಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿತ್ತು. ಸಂಘದ ಆಸ್ತಿಗಳಿಂದ ಠೇವಣಿದಾರರ 42 ಕೋಟಿ ರೂ.ಗಳಗೂ ಅಧಿಕ ಹಣವನ್ನು ಮರಳಿಸಲು ಸಾಧ್ಯವಾಗದ ಕಾರಣ ನಿರ್ದೇಶಕರ ಅಸ್ತಿಗಳನ್ನು ಮುಟ್ಟುಗೋಲು ಹಾಕಲು ಸರ್ಕಾರ ನಿರ್ಧರಿಸಿತ್ತು.ಇದನ್ನು ಪ್ರಶ್ನಿಸಿ ನಿರ್ದೇಶಕರಲ್ಲಿ ಒಬ್ಬರಾದ ಡಾ. ವಿಶ್ವನಾಥ ಭೀಮಶಂಕರ ದೀಪಾಲಿ ಹೈಕೋರ್ಟ್‌ಗೆ
ಅರ್ಜಿ ಸಲ್ಲಿಸಿದ್ದರು. 2015ರಲ್ಲೇ ಸಂಘದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಮತ್ತು ಅಕ್ರಮ ನಡೆದ ಸಮಯದಲ್ಲಿ ಅಧಿಕಾರದಲ್ಲಿ ಇರಲಿಲ್ಲ ಎಂದು ವಾದಿಸಿದ್ದರು. ಮುಟ್ಟುಗೋಲು ಹಾಕಿಕೊಂಡ ಆಸ್ತಿಯನ್ನು 2019ರಲ್ಲಿ ಖರೀದಿಸಿದ್ದು, ಅದು ರಾಜೀನಾಮೆಯ ನಂತರದ ತಮ್ಮ ಗಳಿಕೆಯಾಗಿದೆ ಎಂದಿದ್ದರು.ಈ ವಾದ ನಿರಾಕರಿಸಿದ ನ್ಯಾಯಪೀಠ, ಅರ್ಜಿ ದಾರರು 2015ರಲ್ಲಿ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ನಿರ್ದೇಶಕ ಸ್ಥಾನದಲ್ಲಿ ಮುಂದುವರಿದಿದ್ದಾರೆ ಎಂಬುದು ದಾಖಲೆಗಳಲ್ಲಿ ಗೊತ್ತಾಗುತ್ತದೆ. ಇಂತಹ ಸಂದರ್ಭದಲ್ಲಿ ಠೇವಣಿದಾರರ ಹಿತರಕ್ಷಣೆಗಾಗಿ ನಿರ್ದೇಶಕರ ಆಸ್ತಿ ಮುಟ್ಟುಗೋಲು ನ್ಯಾಯಸಮ್ಮತವಾಗಿದೆ ಎಂದು ತೀರ್ಪು ನೀಡಿದೆ.













































