ದಾವಣಗೆರೆ: ಮನರೇಗಾ ಬದಲು ವಿಬಿ ಜಿ ರಾಮ್ ಜಿ ಯೋಜನೆರೂಪಿಸಿದ ಕೇಂದ್ರ ಸರ್ಕಾರದ ನಡೆಗೆ ಕೆಂಡಕಾರುತ್ತಲೇ ಇರುವ ರಾಜ್ಯ ಸರ್ಕಾರ ಜಿ ರಾಮ್ ಜಿ ಯೋಜನೆಗೆ ಪರ್ಯಾಯವಾಗಿ ತನ್ನದೇ ಸ್ವತಂತ್ರ ಹೊಸ ‘ಉದ್ಯೋಗ ಖಾತ್ರಿ’ ಕಾರ್ಯಕ್ರಮ ರೂಪಿಸಲು ಮುಂದಾಗಿದೆ. ಇದಕ್ಕಾಗಿ ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದು, ಉದ್ಯೋಗ ಖಾತ್ರಿಯಲ್ಲಿ ‘ಗಾಂಧಿ’ಗೆ ಮರು ಜನ್ಮ ನೀಡಲು ಸಜ್ಜಾಗಿದೆ.ಖಾತ್ರಿ ಯೋಜನೆಗಾಗಿ ಈಗಾಗಲೇ ನಡೆಯಬೇಕಿದ್ದ ಮುಂದಿನ ಆರ್ಥಿಕ ವರ್ಷದ ಕ್ರಿಯಾಯೋಜನೆ ತಯಾರಿ ಕಾರ್ಯ ನಡೆದಿಲ್ಲ. ಇದರಿಂದ ಏಪ್ರಿಲ್ ತಿಂಗಳಿನಿಂದಲೇ ತಲೆದೋರಬಹುದಾದ ಗ್ರಾಮೀಣ ಕೂಲಿ ಕಾರ್ಮಿಕರ ಕೆಲಸದ ಸಮಸ್ಯೆಗೆ ಸ್ಪಂದಿಸಲು ಸರ್ಕಾರ ಪರ್ಯಾಯ ಯೋಜನೆ ರೂಪಿಸಲು ಚಿಂತಿಸಿದೆ. ವಿಬಿ ಜಿ ರಾಮ್ ಜಿಗೆ ಪರ್ಯಾಯವಾಗಿ ಕೆಲಸ ಕೇಳಿ ಬರುವ ಗ್ರಾಮೀಣ ಕಾರ್ಮಿಕರಿಗೆ ವ್ಯವಸ್ಥೆ ಕಲ್ಪಿಸಲು ಯುದ್ಧೋಪಾದಿಯಲ್ಲಿ ತಯಾರಿ ನಡೆಸಿದ್ದು, ಮಾ.6ರಂದು ಮಂಡಿಸುವ ರಾಜ್ಯ ಬಜೆಟ್‌ನಲ್ಲಿ ಹೊಸ ಯೋಜನೆ ಘೋಷಣೆ ಜತೆಗೆ ಅನುದಾನ ಮೀಸಲಿಡಲು ಅಗತ್ಯ ಮಾಹಿತಿ ಸಂಗ್ರಹಿಸುತ್ತಿದೆ. ಕೇಂದ್ರದ ಗಾಂಧಿ ವಿರೋಧಿ ನಡೆಯನ್ನೇ ಅಸ್ತ್ರವಾಗಿಸಿಕೊಂಡು ಹೊಸ ಯೋಜನೆ ಜಾರಿ ಮಾಡಿ ಸೆಡ್ಡು ಹೊಡೆಯಲು ಸಜ್ಜಾಗಿದೆ. ಅಲ್ಲದೇ ಇನ್ನೊಂದು ಗ್ಯಾರಂಟಿ ಯೋಜನೆ ಆಗಿಯೂ ಬಳಸಿಕೊಳ್ಳಲು ಸಜ್ಜಾಗಿದೆ.
ಸಿಇಒಗಳ ಸಭೆ:
ಸರ್ಕಾರದ ಈ ಹೊಸ ಚಿಂತನೆಯ ಭಾಗವಾಗಿ ಬುಧವಾರ ಸಂಜೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿರ್ದೇಶನದ ಮೇರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸಮೀರ್ ಶುಕ್ಲಾ ವಿಡಿಯೋ ಕಾನ್ಸರೆನ್ಸ್ ಮೂಲಕ ರಾಜ್ಯದ ಎಲ್ಲ ಜಿಪಂ ಸಿಇಒಗಳ ತುರ್ತು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮನರೇಗಾ ಯೋಜನೆಯಡಿ ಇದುವರೆಗೆ ಸೃಜಿಸಲಾದ ಮಾನವ ದಿನಗಳನ್ನು ಪರಿಶೀಲಿಸಿ, ಪ್ರಸ್ತುತ ಕೂಲಿಕಾರರ ಬೇಡಿಕೆ ಎಷ್ಟಿದೆ ಎಂಬುದನ್ನು ಮರುಮೌಲ್ಯಮಾಪನ ಮಾಡಿ ವರದಿ ಸಲ್ಲಿಸಲು ಜಿಪಂ ಸಿಇಒಗಳಿಗೆ ಸೂಚಿಸಿದ್ದಾರೆ.ಈ ಸಂಬಂಧ ಸಿಇಒಗಳು ಪಿಡಿಒಗಳೊಂದಿಗೆ ನೇರ ಸಂವಾದ ನಡೆಸಿ, ಗ್ರಾಮವಾರು ಮಾನವ ದಿನಗಳ ನಿಖರ ಬೇಡಿಕೆಯನ್ನು ಸಂಗ್ರಹಿಸಿ, ಎರಡು ದಿನಗಳ ಒಳಗಾಗಿ ಗ್ರಾಮೀಣಾಭಿವೃದ್ಧಿ ಆಯುಕ್ತರಿಗೆ ವರದಿ ಸಲ್ಲಿಸಬೇಕೆಂದು ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಗೌಪ್ಯತೆ ಕಾಪಾಡಲು ಸೂಚನೆ:
ಮನರೇಗಾ ಯೋಜನೆಯಲ್ಲಿ ಮಾಡುತ್ತಿದ್ದಂತೆ ಅಂದಾಜು ಮಾನವ ದಿನಗಳ ಸೃಜನೆಯ ಗುರಿ ಇಟ್ಟುಕೊಳ್ಳುವುದನ್ನು ಬಿಟ್ಟು ಪ್ರಸ್ತುತ ವರ್ಷ ಪ್ರತಿ ಜಿಲ್ಲೆಯಲ್ಲಿ ಸೃಜನೆಯಾಗಬಹುದಾದ ವಾಸ್ತವಿಕ ಮಾನವ ದಿನಗಳ ನಿಖರ ಅಂಕಿ ಅಂಶಗಳನ್ನು ನೀಡುವಂತೆ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಹಾಗೂ ಇದು ಇಲಾಖೆಯ ಆಂತರಿಕ ಮೌಲ್ಯಮಾಪನವಾಗಿದ್ದು ಈ ಮಾಹಿತಿ ಎಲ್ಲಿಯೂ ಬಹಿರಂಗವಾಗದಂತೆ ಎಚ್ಚರ ವಹಿಸಲು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಮಾರ್ಗಸೂಚಿ ಸಿದ್ಧತೆಗೆ ತಯಾರಿ:
ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೆಲಸದ ಅಗತ್ಯವಿದೆ ಎಂಬ ಸಮಗ್ರ ಮಾಹಿತಿ ಶೀಘ್ರ ಪಡೆಯಲು ಮುಂದಾಗಿರುವ ಸರ್ಕಾರ, ಇದಕ್ಕಾಗಿ ಎಷ್ಟು ಹಣ ಬೇಕಾಗಬಹುದು ಹಾಗೂ ಬಜೆಟ್‌ನಲ್ಲಿ ಎಷ್ಟು ಅನುದಾನ ಮೀಸಲಿಡಬಹುದು ಎಂಬ ಬಗ್ಗೆ ಲೆಕ್ಕ ಹಾಕಲು ಮುಂದಾಗಿದೆ. ಇದರೊಂದಿಗೆ ಇದಕ್ಕಾಗಿ ರೂಪಿಸಬಹುದಾದ ಪ್ರತ್ಯೇಕ ಮಾರ್ಗಸೂಚಿ ಸಿದ್ಧಪಡಿಸಲು ಸಹ ತಯಾರಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.ಒಟ್ಟಾರೆ ಏಪ್ರಿಲ್‌ನಿಂದ ಯಾವುದೇ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿ ಇರದಿದ್ದರೂ ಗ್ರಾಮೀಣ ಬಡಕಾರ್ಮಿಕರಿಗೆ ಕೆಲಸ ಸಿಗುವಂತೆ ಮಾಡಲು ಸರ್ಕಾರ ಈ ಪರ್ಯಾಯ ಕ್ರಮಕ್ಕೆ ಮುಂದಾಗಿದೆ. ಅಲ್ಲದೇ ರಾಜ್ಯದಲ್ಲಿ ಹೊಸ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳಿಗೆ ಸೆಡ್ಡು ಹೊಡೆಯಲು ತಂತ್ರ ರೂಪಿಸುತ್ತಿದ್ದು ರಾಜ್ಯ ಸರ್ಕಾರದ ಈ ಹೊಸ ಸಾಹಸ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬ ಕುತೂಹಲ ಮೂಡಿದೆ.
ಮನರೇಗಾ ಮರು ನಾಮಕರಣ?
ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯ ಹೆಸರು (ಮನರೇಗಾ) ಬದಲಾಯಿಸಿರುವುದನ್ನೇ ದೊಡ್ಡ ಟೀಕಾಸ್ತ್ರವನ್ನಾಗಿಸಿ ಕೊಂಡಿರುವ ಕಾಂಗ್ರೆಸ್, ರಾಜ್ಯದಲ್ಲಿ ವಿಬಿ ಜಿ ರಾಮ್ ಜಿಗೆ ಪರ್ಯಾಯವಾಗಿ ರೂಪಿಸಲು ಮುಂದಾಗಿರುವ ಹೊಸ ಉದ್ಯೋಗ ಖಾತ್ರಿ ಯೋಜನೆಗೆ ಮನರೇಗಾ ಯೋಜನೆ ಎಂದೇ ಹೆಸರಿಡಲು ಚಿಂತನೆ ನಡೆದಿದೆ ಎನ್ನಲಾಗಿದೆ. ಆದರೆ ಅದರ ಬದಲು ಗಾಂಧಿ ಹೆಸರು ತೆಗೆದಿರುವ ಕೇಂದ್ರದ ನಡೆಗೆ ಟಕ್ಕರ್ ನೀಡಲು ಗಾಂಧಿ ಹೆಸರಿನಲ್ಲೇ ಯೋಜನೆ ರೂಪಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಆತಂಕದಲ್ಲಿ 7000 ಗುತ್ತಿಗೆ ನೌಕರರ
ಮನರೇಗಾ ವ್ಯವಸ್ಥೆಗಳಿಗೆ ಏಪ್ರಿಲ್‌ನಿಂದಲೇ ತೆರೆ ಬೀಳುವ ಸಾಧ್ಯತೆಯಿದ್ದು ಈ ಯೋಜನೆಯನ್ನೇ ನಂಬಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಏಳು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಗುತ್ತಿಗೆ ನೌಕರರ ಕೆಲಸದ ಮೇಲೂ ತೂಗುಗತ್ತಿ ನೇತಾಡುತ್ತಿದೆ. ಅತ್ತ ಮನರೇಗಾನೂ ಇಲ್ಲ, ಇತ್ತ ವಿಬಿ ಜಿ ರಾಮ್ ಜಿಯೂ ಇಲ್ಲ ಎಂದಾದರೆ ಈವರೆಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರ ಉದ್ಯೋಗದ ಬಗ್ಗೆ ರಾಜ್ಯ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆ ನೌಕರಲ್ಲಿ ಆತಂಕ ಮೂಡಿದೆ.
- ಎಚ್.ಕೆ. ನಟರಾಜ













































