ಕೇಪು ಕೋಳಿ ಅಂಕ ಪ್ರಕರಣ : ಮಾಜಿ ಶಾಸಕ ಮಠಂದೂರು,ಬಿಜೆಪಿ ಜಿಲ್ಲಾಧ್ಯಕ್ಷ ಕುಂಪಲ ಸೇರಿ 27 ಮಂದಿ ವಿರುದ್ಧದ ಪ್ರಕರಣದ ವಿಚಾರಣೆಗೂ ಹೈಕೋರ್ಟ್ ತಡೆ

Picture of Savistara

Savistara

Bureau Report

ಪುತ್ತೂರು:ಇತಿಹಾಸ ಪ್ರಸಿದ್ಧ ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಕಜಂಬು ಉತ್ಸವದ ಬಳಿಕ ವರ್ಷಂಪ್ರತಿಯಂತೆ ನಡೆದ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿ ಮಾಜಿ ಶಾಸಕ ಸಂಜೀವ ಮಠಂದೂರು,ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಸಹಿತ 27 ಮಂದಿ ವಿರುದ್ಧ ದಾಖಲಿಸಿಕೊಂಡಿರುವ ಪ್ರಕರಣದ ಮುಂದಿನ ವಿಚಾರಣೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಶಾಸಕ ಅಶೋಕ್‌ ಕುಮಾರ್ ರೈ ಮತ್ತಿತರರ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ಫೆ.12ರಂದು ತಡೆಯಾಜ್ಞೆ ನೀಡಿ ಆದೇಶಿಸಿತ್ತು. ಪ್ರತಿವರ್ಷ ಕೇಪು ಜಾತ್ರೆ ಸಂದರ್ಭಸಾಂಪ್ರದಾಯಿಕ ಕೋಳಿ ಅಂಕ ನಡೆಯುತ್ತಿತ್ತು.ಆದರೆ ಈ ಬಾರಿ ಜಿಲ್ಲಾ ಪೊಲೀಸರು ಕೋಳಿ ಅಂಕಕ್ಕೆ ಅವಕಾಶ ನಿರಾಕರಿಸಿದ್ದರು.ಆದರೆ,ಸಾಂಪ್ರದಾಯಿಕ ಜೂಜು ರಹಿತ ಕೋಳಿ ಅಂಕ ಎನ್ನುವ ನಿಟ್ಟಿನಲ್ಲಿ ಕೇಪು ಕೋಳಿ ಅಂಕಕ್ಕೆ ಬೆಂಬಲ ಘೋಷಿಸಿದ್ದ ಶಾಸಕ ಅಶೋಕ್ ಕುಮಾರ್ ರೈಯವರ ಖುದ್ದು ಉಪಸ್ಥಿತಿಯಲ್ಲಿ ಮೊದಲ ದಿನ ಡಿ.20ರಂದು ಸಂಜೆ ತನಕ ಕೋಳಿ ಅಂಕ ನಡೆದಿತ್ತು.ಎರಡನೇ ದಿನ ಡಿ.21ರಂದು ಬಿಜೆಪಿ ಮುಖಂಡರ ಉಪಸ್ಥಿತಿಯಲ್ಲಿ ಕೋಳಿ ಅಂಕ ನಡೆದಿತ್ತು. ಎರಡೂ ದಿನವೂ ಕೋಳಿ ಅಂಕಕ್ಕೆ ದಾಳಿ ನಡೆಸಿದ್ದ ವಿಟ್ಲ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.

ಡಿ.21ರಂದು ಬೆಳಗ್ಗೆ ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ,ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್‌ರವರ ನೇತೃತ್ವದಲ್ಲಿ ಪಕ್ಷದ ಮುಖಂಡರು ಕೇಪು ಶ್ರೀ ಉಳ್ಳಾಲ್ತಿ ಕ್ಷೇತ್ರದ ಗದ್ದೆಗೆ ಆಗಮಿಸಿ ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿ ಹಿಂದೂ ಧಾರ್ಮಿಕ ಭಾವನೆಯ ನೆಲೆಗಟ್ಟಿನಲ್ಲಿ ನಡೆಯುವ ಸಾಂಪ್ರದಾಯಿಕ ಕೋಳಿ ಅಂಕವನ್ನು ಮುಂದುವರೆಸುವಂತೆ ತಿಳಿಸಿದ್ದರು. ಪರಿಣಾಮ ಕೋಳಿ ಅಂಕ ಮುಂದುವರಿದಿತ್ತು.ಅಲ್ಪ ಹೊತ್ತಿನ ಬಳಿಕ ಏಕಾಏಕಿಯಾಗಿ ದಾಳಿ ನಡೆಸಿದ್ದ ವಿಟ್ಲ ಠಾಣಾ ಪೊಲೀಸರು ಕೋಳಿ ಅಂಕಕ್ಕೆ ಬಂದಿದ್ದ 20 ಮಂದಿಯನ್ನು ಹಾಗೂ 20 ಕೋಳಿ,ಕೋಳಿ ಬಾಳುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕದ ಬೆಳವಣಿಗೆಯಲ್ಲಿ ಕಾನೂನು ಬಾಹಿರ ಕೃತ್ಯಕ್ಕೆ ಪ್ರಚೋದನೆ ಮತ್ತು ದುಪ್ರೇರಣೆ ನೀಡಿದ ಆರೋಪದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು,ಜಾಗದ ಮಾಲೀಕ ಮುರಳೀಧರ ರೈ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಗ್ರಾಮಾಂತರ ಮಂಡಲಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್‌ ಯಾದವ್, ವಿಟ್ಲ ಪ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾ‌ರ್ ಶೆಟ್ಟಿ, ಪುಣಚ ಮಹಾಶಕ್ತಿಕೇಂದ್ರದ ಅಧ್ಯಕ್ಷ ರಾಜೇಶ್ ಬಾಳೆಕಲ್ಲು ಹಾಗೂ ಕೋಳಿ ಅಂಕದಲ್ಲಿ ಭಾಗಿಯಾಗಿದ್ದ ಅವಿನಾಶ್, ರವಿ, ಧರ್ನಪ್ಪ,ಗೋಪಾಲ ಪೂಜಾರಿ, ಪುರುಷೋತ್ತಮ, ಯತಿನ್,ಗಿರಿಯಪ್ಪ,ಮೋಹನ್, ಪ್ರಶಾಂತ್,ರಮೇಶ್,ನವೀನ್, ಶಾಂತರಾಮ ಶೆಟ್ಟಿ,ಗಿರೀಶ್, ಆದರ್ಶ, ನೋಣಯ್ಯ ಗೌಡ, ಅನೀಶ್, ಗುರುವಪ್ಪ,ರಂಜಿತ್, ದಿನೇಶ್ ಮತ್ತು ಹರೀಶ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದದರು.

‘ಡಿ.21ರಂದು ಬೆಳಿಗ್ಗೆ, ಬಂಟ್ವಾಳ ಕೇಪು ಗ್ರಾಮದ ಕೇಪು ಎಂಬಲ್ಲಿ ಮುರಳೀಧರ ರೈ ಎಂಬವರ ಬಾಬು ಗದ್ದೆಯಲ್ಲಿ, ಹಲವು ಜನರು ಸೇರಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದು ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ,ಠಾಣಾ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ,ಮುರಳೀಧರ ರೈ ಎಂಬವರ ಗದ್ದೆಯಲ್ಲಿ ಹಲವಾರು ಜನರು ಗುಂಪು ಸೇರಿಕೊಂಡು ಹಿಂಸಾತ್ಮಕವಾಗಿ ಕೋಳಿ ಅಂಕ ಆಟವಾಡುತ್ತಿರುವುದು ಕಂಡುಬಂದಿರುತ್ತದೆ. ಅಲ್ಲಿ ನೆರೆದಿದ್ದ ಜನರಿಗೆ ಅಕ್ರಮ ಕೋಳಿ ಅಂಕದ ಬಗ್ಗೆ ಕಾನೂನು ತಿಳುವಳಿಕೆ ನೀಡಿದರೂ, ಸೇರಿದ್ದ ಜನರು ಸ್ಥಳದಿಂದ ತೆರಳದೇ ನಿಂತುಕೊಂಡಿರುತ್ತಾರೆ ಹಾಗೂ ಸ್ಥಳದಲ್ಲಿ ಹಾಜರಿದ್ದ ಸಂಜೀವ ಮಠಂದೂರು,ಮುರಳೀಧರ ರೈ,ಸತೀಶ ಕುಂಪಲ,ದಯಾನಂದ ಉಜಿರೆಮಾರು,ಹರಿಪ್ರಸಾದ್ ಯಾದವ್,ಅಶೋಕ ಶೆಟ್ಟಿ ವಿಟ್ಲ ರಾಜೇಶ್ ಬಾಳೆಕಲ್ಲು ಎಂಬವರು ಅಲ್ಲಿ ಸೇರಿದ್ದ ಜನರಿಗೆ ಕಾನೂನು ಬಾಹಿರ ಕೋಳಿ ಅಂಕವನ್ನು ಮುಂದುವರಿಸುವಂತೆ ಪ್ರಚೋದನೆ ಮತ್ತು ದುಷ್ಟೇರಣೆಯನ್ನು ನೀಡಿರುತ್ತಾರೆ.ಮುಂದುವರೆದಂತೆ ಅಗತ್ಯ ಪೊಲೀಸ್‌ ಭದ್ರತೆಯನ್ನು ಏರ್ಪಡಿಸಿ, ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ 20 ಜನರನ್ನು ವಶಕ್ಕೆ ಪಡೆದು, ಸ್ಥಳದಲ್ಲಿದ್ದ 20 ಹುಂಜ ಕೋಳಿಗಳನ್ನು ಹಾಗೂ ಕೋಳಿ ಅಂಕಕ್ಕೆ ಬಳಸುವ ಕತ್ತಿ (ಬಾಳು)ಗಳನ್ನು ಸ್ವಾಧೀನಪಡಿಸಲಾಗಿದ್ದು, ಸದ್ರಿ ಕಾನೂನು ಬಾಹಿರ ಕೃತ್ಯಕ್ಕೆ ಪ್ರಚೋದನೆ ಮತ್ತು ದುಷ್ಟೇರಣೆ ನೀಡಿದವರು ಹಾಗೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದವರು ಸೇರಿ ಒಟ್ಟು 27 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ : 189(2), 49, 221, 223, 190 BNS 2023 2 3, 11 PREVENTION OF CRUELTY TO ANIMALS ACT ಅಡಿಯಲ್ಲಿ ಪ್ರಕರಣ(191/2025) ದಾಖಲಾಗಿತ್ತು.ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಹೈಕೋರ್ಟ್‌ಗೆ ಕ್ರಿಮಿನಲ್ ಪಿಟಿಷನ್:

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಪ್ರಕರಣದ ಆರೋಪಿಗಳು ಹೈಕೋರ್ಟ್‌ಗೆ ಕ್ರಿಮಿನಲ್ ರಿಟ್ ಅರ್ಜಿ ಸಲ್ಲಿಸಿದ್ದರು.ಅರ್ಜಿಯನ್ನು ವಿಚಾರಣೆಗೆತ್ತಿಕೊಂಡಿರುವ ನ್ಯಾಯಪೀಠ ಸಂಜೀವ ಮಠಂದೂರು ಸಹಿತ 27 ಮಂದಿ ವಿರುದ್ಧ ದಾಖಲಾಗಿರುವ ಪ್ರಕರಣದ ಮುಂದಿನ ವಿಚಾರಣೆಗೆ ತಡೆಯಾಜ್ಞೆ ನೀಡಿದೆ.ಆರೋಪಿಗಳ ಪರ ಹಿರಿಯ ವಕೀಲ ಅರುಣ್‌ಶ್ಯಾಂ ವಾದಿಸಿದ್ದರು.ವಕೀಲ ಸುಯೋಗ್ ಹೇರಳೆ ವಕಾಲತ್ತು ವಹಿಸಿದ್ದರು.

2 ಪ್ರಕರಣಗಳಿಗೂ ತಡೆ

ಅಕ್ರಮ ಕೋಳಿ ಅಂಕಕ್ಕೆ ಸಂಬಂಧಿಸಿ ಮೊದಲ ದಿನದ ಘಟನೆಗೆ ಸಂಬಂಧಿಸಿ ಶಾಸಕ ಅಶೋಕ್ ಕುಮಾರ್ ರೈ ಸಹಿತ ಕೆಲವರ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಈ ಮೊದಲೇ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.ಎರಡನೇ ದಿನ ನಡೆದ ಕೋಳಿ ಅಂಕಕ್ಕೆ ಸಂಬಂಧಿಸಿ ಮಾಜಿ ಶಾಸಕ ಸಂಜೀವ ಮಠಂದೂರು ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಸಹಿತ 27 ಜನರ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆಗೂ ಇದೀಗ ನ್ಯಾಯಪೀಠ ತಡೆಯಾಜ್ಞೆ ನೀಡಿದೆ.ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳ ಪರ ಹಿರಿಯ ವಕೀಲ ಅರುಣ್‌ಶ್ಯಾಂ ವಾದಿಸಿದ್ದು,ವಕೀಲ ಸುಯೋಗ್ ಹೇರಳೆ ವಕಾಲತ್ತು ವಹಿಸಿದ್ದರು.ಮುಂದೆ ಎರಡೂ ಪ್ರಕರಣಗಳ ವಿಚಾರಣೆ ನ್ಯಾಯಪೀಠದಲ್ಲಿ ಒಟ್ಟಿಗೇ ನಡೆಯಲಿದೆ.

[t4b-ticker]
error: Content is protected !!