ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಉತ್ತುಂಗಕ್ಕೇರಿದ್ದು, ಇರಾನ್(Iran) ಮೇಲೆ ಅಮೆರಿಕ ಭೂದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ, ಇರಾನ್ ಸಂಸತ್ ಸ್ಪೀಕರ್, ಅಮೆರಿಕ ಸೈನಿಕರು ಭೂದಾಳಿಗೆ ಬಂದರೆ ನಮ್ಮವರು ಗುಂಡು ಹಾರಿಸಲು ಕಾಯುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಭಾನುವಾರ(ಮಾ. 29) ಸುದ್ದಿಸಂಸ್ಥೆ ಐಆರ್ಎನ್ಎಗೆ ಮಾತನಾಡಿರುವ ಮೊಹಮ್ಮದ್ ಬಘರ್ ಗಾಲಿಬಾಫ್, ಶತ್ರುಗಳು ಸಾರ್ವಜನಿಕವಾಗಿ ಮಾತುಕತೆ ಮತ್ತು ಸಂವಾದದ ಸಂದೇಶಗಳನ್ನು ಕಳುಹಿಸುತ್ತಾರೆ ಮತ್ತು ರಹಸ್ಯವಾಗಿ ನೆಲದ ಮೇಲೆ ದಾಳಿ ನಡೆಸಲು ಯೋಜಿಸುತ್ತಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಸೈನಿಕರು ನೆಲದ ಮೇಲೆ ಅಮೆರಿಕದ ಸೈನಿಕರ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಮತ್ತು ಅವರ ಪ್ರಾದೇಶಿಕ ಮಿತ್ರರಾಷ್ಟ್ರಗಳನ್ನು ಒಮ್ಮೆಗೇ ಶಿಕ್ಷಿಸಲು ಕಾಯುತ್ತಿದ್ದಾರೆ. ಯುದ್ಧವು ಅತ್ಯಂತ ನಿರ್ಣಾಯಕ ಹಂತದಲ್ಲಿದೆ ಇರಾನಿಯನ್ನರು ಎಲ್ಲರೂ ಒಗ್ಗಟ್ಟಿನಿಂದ ಇರುವಂತೆ ಕರೆ ನೀಡಿದ್ದಾರೆ.
ಅಮೆರಿಕ ಮತ್ತು ಇಸ್ರೇಲಿ ಪಡೆಗಳು ಇರಾನ್ ಮೇಲೆ ಒಂದು ತಿಂಗಳಿಗೂ ಹೆಚ್ಚು ಕಾಲ ವೈಮಾನಿಕ ಬಾಂಬ್ ದಾಳಿ ನಡೆಸಿದ ನಂತರ ಮತ್ತು ಪ್ರಮುಖ ಪ್ರಾದೇಶಿಕ ಪಾಲುದಾರರು ಪಾಕಿಸ್ತಾನದಲ್ಲಿ ಕದನ ವಿರಾಮಕ್ಕೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅದರ ನಡುವೆ ಅಮೆರಿಕ ಸುಮಾರು 3,500 ಮಿಲಿಟರಿ ಸಿಬ್ಬಂದಿಯನ್ನು & ಯುದ್ಧನೌಕೆ ಮಧ್ಯಪ್ರಾಚ್ಯಕ್ಕೆ ಕಳುಹಿಸಿದ್ದು ಇರಾನ್ ಕಣ್ಣು ಕೆಂಪಾಗಿಸಿದೆ. ಫೆ. 28ರಂದು ಇರಾನ್ ಮೇಲೆ ಇಸ್ರೇಲ್-ಅಮೆರಿಕ ಜಂಟಿ ದಾಳಿ ನಡೆಸಿದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಿದ ಬಳಿಕ, ಗಲ್ಫ್ ರಾಷ್ಟ್ರಗಳು ಮತ್ತು ಹಾರ್ಮುಜ್ ಜಲಸಂಧಿ ಹಡಗು ಮಾರ್ಗದ ಮೇಲೆ ಇರಾನ್ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದು, ಯುದ್ಧವು ಪ್ರಾದೇಶಿಕ ಘರ್ಷಣೆಯಾಗಿ ಬೆಳೆದಿದೆ. ಇರಾನ್ ಗಲ್ಪ್ ರಾಷ್ಟ್ರಗಳ ತೈಲ ಉತ್ಪನ್ನ ಘಟಕಗಳ ಮೇಲಿನ ದಾಳಿ ಮತ್ತು ಹಾರ್ಮುಜ್ ಜಲಸಂಧಿ ಬಂದ್ ಮಾಡಿದ ನಿರ್ಧಾರ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿದೆ ಮತ್ತು ವಿಶ್ವ ಆರ್ಥಿಕತೆಗೆ ಬೆದರಿಕೆಯನ್ನೊಡ್ಡಿದೆ. ಈ ಹಿನ್ನೆಲೆ ಅಮೆರಿಕ ಇರಾನ್ನಿಂದ ಅದರ ಖಾರ್ಗ್ ದ್ವೀಪ ಮತ್ತು ಹಾರ್ಮುಜ್ ಜಲಸಂಧಿಯನ್ನು ವಶಪಡಿಸಿಕೊಳ್ಳಲು ಸುದೀರ್ಘವಾದ ಭೂದಾಳಿಗೆ ಸಿದ್ದತೆ ನಡೆಸಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.













































