ನವದೆಹಲಿ: ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರಿಳಿತ ಮತ್ತುಮಧ್ಯಪ್ರಾಚ್ಯದಲ್ಲಿನ (ಯುಎಸ್-ಇರಾನ್) ಯುದ್ಧದ ಭೀತಿಯಿಂದಾಗಿ ದೇಶದಲ್ಲಿ ಪ್ರೀಮಿಯಂ ಇಂಧನಗಳ ಬೆಲೆ ಗಗನಕ್ಕೇರಿದೆ. ಪ್ರಮುಖವಾಗಿ ವಿಮಾನ ಇಂಧನ (ATF) ಮತ್ತು ಪ್ರೀಮಿಯಂ ಪೆಟ್ರೋಲ್ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ಪ್ರೀಮಿಯಂ ಪೆಟ್ರೋಲ್ ದರ ಏರಿಕೆ: ಇಂಡಿಯನ್ ಆಯಿಲ್‌ನ 100-ಆಕ್ಟೇನ್ಪ್ರೀಮಿಯಂ ಪೆಟ್ರೋಲ್ (XP100) ಬೆಲೆ ಪ್ರತಿ ಲೀಟರ್‌ಗೆ 149ರೂ. ರಿಂದ 160ರೂ.ಕ್ಕೆ ಏರಿಕೆಯಾಗಿದೆ. ಇದು ಐಷಾರಾಮಿ ಕಾರುಗಳು ಮತ್ತು ಸೂಪರ್ ಬೈಕ್‌ಗಳಿಗೆ ಬಳಸಲಾಗುವ ಇಂಧನವಾಗಿದೆ. ಎಕ್ಸ್‌ಟ್ರಾ ಗ್ರೀನ್ (Xtra Green) ಪ್ರೀಮಿಯಂ ಡೀಸೆಲ್ ಬೆಲೆಯೂ ಲೀಟರ್‌ಗೆ 92.99ರೂ. ಕ್ಕೆ ಏರಿದೆ
ದಾಖಲೆ ಬರೆದ ವಿಮಾನ ಇಂಧನ (ATF): ಇತಿಹಾಸದಲ್ಲೇ ಮೊದಲ ಬಾರಿಗೆ ವಿಮಾನ ಇಂಧನದ ಬೆಲೆ ಪ್ರತಿ ಲೀಟರ್‌ಗೆ 2.07 ಲಕ್ಷ ದಾಟಿದೆ. ದೆಹಲಿಯಲ್ಲಿ ಎಟಿಎಫ್ ಬೆಲೆ 2,07,341 ಕ್ಕೆ ತಲುಪಿದ್ದು, ಇದು ವಿಮಾನಯಾನ ಸಂಸ್ಥೆಗಳಿಗೆ ಭಾರಿ ಹೊರೆಯಾಗಲಿದೆ.
ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ ಏರಿಕೆ: 19 ಕೆಜಿ ವಾಣಿಜ್ಯ ಎಲ್‌ಪಿಜಿಸಿಲಿಂಡರ್ ಬೆಲೆಯಲ್ಲಿ 195.50ರೂ. ಏರಿಕೆ ಮಾಡಲಾಗಿದ್ದು, ದೆಹಲಿಯಲ್ಲಿ ಇದರ ಬೆಲೆ 2,078.50ರೂ. ತಲುಪಿದೆ. ಇದು ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಆಘಾತ ನೀಡಿದೆ.
ಸಾಮಾನ್ಯ ಪೆಟ್ರೋಲ್-ಡೀಸೆಲ್ ಸ್ಥಿರ: ಪ್ರೀಮಿಯಂ ಇಂಧನಗಳ ಬೆಲೆಏರಿಕೆಯಾಗಿದ್ದರೂ, ಸಾಮಾನ್ಯ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಸರ್ಕಾರ ಗ್ರಾಹಕರಿಗೆ ಸಮಾಧಾನ ನೀಡಿದೆ. ಕಳೆದ ಮಾರ್ಚ್ 27 ರಂದು ಅಬಕಾರಿ ಸುಂಕ ಕಡಿತಗೊಳಿಸಿದ್ದರಿಂದ ಈ ದರಗಳು ಸ್ಥಿರವಾಗಿವೆ.
ಬೆಲೆ ಏರಿಕೆಗೆ ಕಾರಣವೇನು?
ಮಧ್ಯಪ್ರಾಚ್ಯದಲ್ಲಿ ಯುಎಸ್ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಪೂರೈಕೆ ವ್ಯತ್ಯಯದಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಶೇ. 50ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಇದು ಭಾರತದ ಇಂಧನ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ.














































