ಬೆಳ್ಳಿಯ ಬೆಲೆ ಶೇ 5.5ರಷ್ಟು ಕುಸಿದರೆ, ಕಚ್ಚಾ ತೈಲ ಬೆಲೆ ಏರಿಕೆಯಿಂದ ಡಾಲರ್ ಬಲವಾದ ಕಾರಣ ಚಿನ್ನ ಕೂಡ ಶೇ 1.6ರಷ್ಟು ಕುಸಿದಿದೆ.ಮಾರ್ಚ್ ತಿಂಗಳಲ್ಲಿ ತೀವ್ರ ಕುಸಿತ ಕಂಡಿರುವ ಚಿನ್ನದ ದರ ತಿಂಗಳ ಅಂತ್ಯಕ್ಕಾಗುವಾಗ ಸ್ವಲ್ಪ ಚೇತರಿಸಿಕೊಂಡಿದೆ. ಫೆಬ್ರವರಿ 28ರಂದು ಆರಂಭವಾದ ಇಸ್ರೇಲ್- ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಡಾಲರ್ ಬೆಲೆಯಲ್ಲಿ ಏರಿಕೆಯಾಗಿರುವುದು ಚಿನ್ನದ ಬೆಲೆ ಕುಸಿತಕ್ಕೆ ಕಾರಣವಾಗಿತ್ತು. ನಂತರ ಯುದ್ಧ ಶಮನಗೊಳ್ಳುವ ನಿರೀಕ್ಷೆಯಿಂದ ಅಲ್ಪಮಟ್ಟಿಗೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಆದರೆ ಇದೀಗ, ಇರಾನ್ ಯುದ್ಧಕ್ಕೆ ಸಂಬಂಧಿಸಿ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರಿವೆ.
ಭೌಗೋಳಿಕ- ರಾಜಕೀಯ ಉದ್ವಿಗ್ನತೆ ಹೆಚ್ಚಾಗುವ ಸೂಚನೆಯಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಳಿತ ಹೆಚ್ಚಾದ ಕಾರಣ ಬೆಳ್ಳಿ ಶೇ 5.5ರಷ್ಟು ಕುಸಿದಿದೆ. ಕಚ್ಚಾ ತೈಲ ಬೆಲೆ ಏರಿಕೆಯಿಂದ ಅಮೆರಿಕದ ಬಾಂಡ್ ಇಳುವರಿ ಹೆಚ್ಚಳವಾಗಿ ಡಾಲರ್ ಬಲವಾದ ಕಾರಣ ಚಿನ್ನ ಕೂಡ ಶೇ 1.6ರಷ್ಟು ಕುಸಿದಿದೆ.
ಇಂದಿನ ಚಿನ್ನದ ದರ ಹೇಗಿದೆ?
ಎಪ್ರಿಲ್ 02ರಂದು ಗುರುವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬುಧವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 153 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,51,420 ರೂ.ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 140 ರೂ. ಕುಸಿದು ಹತ್ತು ಗ್ರಾಂಗೆ 1,38,800 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 114 ರೂ. ಕುಸಿತ ಕಂಡು ಹತ್ತು ಗ್ರಾಂಗೆ 1,13,570 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಎಪ್ರಿಲ್ 02ರಂದು ಗುರುವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,142 (-153) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 13,880 (-140) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,357 (-114) ರೂ. ಬೆಲೆಗೆ ತಲುಪಿದೆ.
ಬೆಳ್ಳಿಯ ದರದಲ್ಲಿ ಚಂಚಲತೆ
ಮಾರ್ಚ್ ಆರಂಭದಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರವಾಗಿದ್ದ ಬೆಳ್ಳಿ ದರ, ಮಾರ್ಚ್ 09ರ ನಂತರ ಸ್ವಲ್ಪ ಕುಸಿತದ ಹಾದಿಯಲ್ಲಿತ್ತು. ಕಳೆದ ವಾರದಿಂದ ಪ್ರತಿ ಕೆಜಿಗೆ 2,45,000-2,50,000 ರೂ. ನಡುವೆ ಸ್ಥಿರವಾಗಿ ನಿಂತಿದ್ದ ಬೆಳ್ಳಿ, ಮಂಗಳವಾರ ಪ್ರತಿ ಗ್ರಾಂಗೆ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,50,000 ರೂ. ಗೆ ಬಂದಿತ್ತು. ಬುಧವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 2,55,000 ರೂ. ಗೆ ಬಂದು ತಲುಪಿತ್ತು. ಇದೀಗ ಗುರುವಾರ ಪ್ರತಿ ಗ್ರಾಂಗೆ 5 ರೂ. ಕುಸಿದು ಮತ್ತೆ ಪ್ರತಿ ಕೆಜಿಗೆ 2,50,000 ರೂ. ಗೆ ಬಂದು ತಲುಪಿದೆ.














































