ಹಾವೇರಿ: ಇಲ್ಲಿಯ ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಂದು ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಆದರೆ, ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಬೊಮ್ಮಾಯಿ, ‘ಹಾವೇರಿ ವಿಶ್ವವಿದ್ಯಾಲಯವು ತನ್ನ ಸಿಂಡಿಕೇಟ್ ಸಭೆಯಲ್ಲಿ ನನಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿರುವುದಕ್ಕೆ ಕುಲಪತಿಗಳು, ಉಪಕುಲಪತಿಗಳು, ಕುಲಸಚಿವರು ಹಾಗೂ ಸಿಂಡಿಕೇಟ್ ಸದಸ್ಯರಿಗೆ ಹೃತ್ತೂರ್ವಕ ಕೃತಜ್ಞತೆಗಳು ಮತ್ತು ಧನ್ಯವಾದಗಳು’ ಎಂದಿದ್ದಾರೆ.’ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ಈಗಾಗಲೇ ಕುಲಪತಿಗಳಿಗೆ ತಿಳಿಸಿದ್ದೇನೆ. ನಾನು ಸಾರ್ವಜನಿಕ ಸೇವೆಯಲ್ಲಿ ಇರುವುದರಿಂದ, ಸಾರ್ವಜನಿಕ ಸೇವೆಗೆ ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸುವುದಿಲ್ಲ. ಸಾರ್ವಜನಿಕ ಸೇವೆಗೆ ಜನರ ಪ್ರೀತಿ ಮತ್ತು ವಿಶ್ವಾಸವೇ ಅತ್ಯಂತ ದೊಡ್ಡ ಗೌರವವೆಂದು ಭಾವಿಸುತ್ತೇನೆ. ಆದ್ದರಿಂದ ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ವಿನಮ್ರವಾಗಿ ಪುನರುಚ್ಚರಿಸುತ್ತೇನೆ’ ಎಂದು ಹೇಳಿದ್ದಾರೆ.
‘ಗೌರವ ಡಾಕ್ಟರೇಟ್ ಎಂಬುದು ದೀರ್ಘಕಾಲದಿಂದ ಯಾವುದಾದರೂ ಕ್ಷೇತ್ರದಲ್ಲಿ ವಿಶಿಷ್ಟ ಮತ್ತು ಮಹತ್ತರ ಸೇವೆ ಸಲ್ಲಿಸಿದವರಿಗೆ ನೀಡಬೇಕಾದ ಗೌರವವೆಂಬುದು ನನ್ನ ಅಭಿಪ್ರಾಯ. ಹೀಗಾಗಿ ಇದನ್ನು ಅಂಥ ಸಾಧಕರಿಗೆ ನೀಡಬೇಕು. ರಾಜಕಾರಣಿಗಳಿಗೆ ಅಥವಾ ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಗೌರವ ಡಾಕ್ಟರೇಟ್ ನೀಡುವುದು ಸಮಂಜಸವಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ವಿಷಯದಲ್ಲಿ ಪುನರ್ ವಿಚಾರ ಮಾಡಬೇಕೆಂದು ವಿನಂತಿಸುತ್ತೇನೆ’ ಎಂದು ತಿಳಿಸಿದ್ದಾರೆ.
‘ಮತ್ತೊಮ್ಮೆ ವಿನಯಪೂರ್ವಕವಾಗಿ ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ತಿಳಿಸುತ್ತಾ, ಹಾವೇರಿ ವಿಶ್ವವಿದ್ಯಾಲಯಕ್ಕೆ ನನ್ನ ಹೃತ್ತೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’ ಎಂದು ಬೊಮ್ಮಾಯಿ ಹೇಳಿದ್ದಾರೆ.













































