ವಾಷಿಂಗ್ಟನ್: ಇರಾನ್ ಹೊರ್ಮುಜ್ ಜಲಸಂಧಿಯನ್ನು ಮರಳಿತೆರೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಗಡುವನ್ನು ಮತ್ತೆ 24 ಗಂಟೆಗಳ ಕಾಲ ವಿಸ್ತರಿಸಿದ್ದಾರೆ. ಒಂದು ವೇಳೆ ಈ ಗಡುವಿನೊಳಗೆ ಜಲಸಂಧಿ ಮುಕ್ತವಾಗದಿದ್ದರೆ, ಇರಾನ್‌ನ ಪ್ರಮುಖ ನೆಲೆಗಳ ಮೇಲೆ ಭೀಕರ ದಾಳಿ ನಡೆಸುವುದಾಗಿ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.ಈ ಕುರಿತು ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣ ಟ್ರುಥ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು ‘ಮಂಗಳವಾರ ರಾತ್ರಿ 8 ಗಂಟೆಯ ಒಳಗೆ ಇರಾನ್ ತನ್ನ ನಿರ್ಬಂಧಗಳನ್ನು ತೆರವುಗೊಳಿಸಿ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಬೇಕು ಇಲ್ಲವಾದಲ್ಲಿ ಮಂಗಳವಾರ ಇರಾನ್ ಪಾಲಿಗೆ ‘ಪವರ್ ಪ್ಲಾಂಟ್ ಡೇ’ ಮತ್ತು ‘ಬ್ರಿಡ್ಜ್ ಡೇ’ ಆಗಲಿದೆ” ಎಂದು ಹೇಳುವ ಮೂಲಕ ಇರಾನ್‌ನ ವಿದ್ಯುತ್ ಸ್ಥಾವರ ಮತ್ತು ಸೇತುವೆಗಳ ಮೇಲೆ ಗುರಿ ಇಟ್ಟಿರುವುದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ.ವಿಶ್ವದ ಒಟ್ಟು ತೈಲ ಮತ್ತು ಅನಿಲ ಪೂರೈಕೆಯ ಸುಮಾರು ಐದನೇ ಒಂದು ಭಾಗದಷ್ಟು ವ್ಯಾಪಾರ ಈ ಜಲಸಂಧಿಯ ಮೂಲಕವೇ ನಡೆಯುತ್ತದೆ.
ಟ್ರಂಪ್ ಈ ಮೊದಲು ಐದು ದಿನಗಳ ಗಡುವು ನೀಡಿದ್ದರು, ನಂತರ ಅದನ್ನು ಹತ್ತು ದಿನಗಳಿಗೆ ವಿಸ್ತರಿಸಿ ಸೋಮವಾರದ ವರೆಗೆ ಗಡುವು ನೀಡಿದ್ದರು ಆದರೆ ಈಗ ಮತ್ತೆ 24 ಗಂಟೆಗಳ ಸಮಯ ನೀಡುವ ಮೂಲಕ ಇರಾನ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಇರಾನ್ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಟ್ರಂಪ್ ಅವರ ಈ ನಿರ್ಧಾರವು ಅಂತರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗಬಹುದು ಎಂದು ವಿಮರ್ಶಕರು ಆತಂಕ ವ್ಯಕ್ತಪಡಿಸಿದ್ದಾರೆ.ಇನ್ನು ಟ್ರಂಪ್ ಅವರ ಈ ಎಚ್ಚರಿಕೆಯನ್ನು ಇರಾನ್ ತಳ್ಳಿಹಾಕಿದ್ದು, ಅಮೆರಿಕದ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದೆ. ಅಲ್ಲದೆ, ಟ್ರಂಪ್ ಅವರ ಹೇಳಿಕೆಯನ್ನು ಮೂರ್ಖತನದ ಪರಮಾವಧಿ” ಎಂದು ಇರಾನ್ ಸೇನಾ ಕಮಾಂಡ್ ಟೀಕಿಸಿದೆ.










































