ಅಮೆರಿಕ- ಇರಾನ್ ಕದನ ವಿರಾಮ | ಶೇರು ಮಾರುಕಟ್ಟೆಗಳಲ್ಲಿ ಸಂಭ್ರಮ: ಶೇ. 3.95ರಷ್ಟು ಜಿಗಿದ ಸೆನ್ಸೆಕ್ಸ್

Picture of Savistara

Savistara

Bureau Report

ಹೊಸದಿಲ್ಲಿ, ಎ. 8: ಅಮೆರಿಕ ಮತ್ತು ಇರಾನ್ ಎರಡು ವಾರಗಳ ಕದನ ವಿರಾಮವನ್ನು ಘೋಷಿಸಿದ ಬಳಿಕ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೀವ್ರ ಏರಿಕೆ ಹಾಗೂ ಕಚ್ಚಾತೈಲ ಬೆಲೆಗಳಲ್ಲಿ ಗಣನೀಯ ಕುಸಿತದ ಹಿನ್ನೆಲೆಯಲ್ಲಿ ಬುಧವಾರ ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು.ಬಾಂಬೆ ಶೇರು ವಿನಿಮಯ ಕೇಂದ್ರದ (BSE) ಸೂಚ್ಯಂಕ ಸೆನ್ಸೆಕ್ಸ್ ಬೆಳಿಗ್ಗೆ ಆರಂಭಗೊಂಡಾಗಲೇ 2,600ಕ್ಕೂ ಅಧಿಕ ಅಂಕಗಳಷ್ಟು ಜಿಗಿದಿದ್ದು, ದಿನವಿಡೀ ಏರಿಕೆಯನ್ನು ದಾಖಲಿಸುತ್ತಲೇ ಇತ್ತು. ಅಂತಿಮವಾಗಿ ಸೆನ್ಸೆಕ್ಸ್ 2,946.32 (ಶೇ. 3.95) ಅಂಕಗಳ ಏರಿಕೆಯೊಂದಿಗೆ 77,562.90ರಲ್ಲಿ ಮುಕ್ತಾಯಗೊಂಡರೆ, ಅತ್ತ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ (NSE) ಸೂಚ್ಯಂಕ ನಿಫ್ಟಿ 873.70 (ಶೇ. 3.76) ಅಂಕಗಳ ಏರಿಕೆಯೊಂದಿಗೆ 23,997.35ರಲ್ಲಿ ಮುಕ್ತಾಯಗೊಂಡಿತು.

ಸೆನ್ಸೆಕ್ಸ್ ನ 30 ಕಂಪನಿಗಳ ಪೈಕಿ ಇಂಟರ್‌ಗ್ಲೋಬ್‌ ಏವಿಯೇಷನ್, ಲಾರ್ಸೆನ್ ಆ್ಯಂಡ್ ಟುಬೊ, ಬಜಾಜ್ ಫೈನಾನ್ಸ್, ಅದಾನಿ ಪೋರ್ಟ್ಸ್, ಬಜಾಜ್ ಫಿನ್‌ಸರ್ವ್ ಹಾಗೂ ಮಹೀಂದ್ರ ಆ್ಯಂಡ್ ಮಹೀಂದ್ರ ಹೂಡಿಕೆದಾರರಿಗೆ ಹೆಚ್ಚಿನ ಲಾಭ ನೀಡಿವೆ.ಅತ್ತ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್ ಗೆ ಶೇ. 13.24ರಷ್ಟು ಕುಸಿದು 94.80 ಡಾಲರ್‌ಗೆ ತಲುಪಿತು.ಭೂರಾಜಕೀಯ ಒತ್ತಡ ತಗ್ಗಿದ ಪರಿಣಾಮ ಕಚ್ಚಾತೈಲ ಬೆಲೆಗಳಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಇದು ವಿಶೇಷವಾಗಿ ಭಾರತಕ್ಕೆ ಹಣದುಬ್ಬರ ಮತ್ತು ಕರೆನ್ಸಿ ದೃಷ್ಟಿಯಿಂದ ಸಕಾರಾತ್ಮಕವಾಗಿದೆ ಎಂದು ಲಿವ್ ಲಾಂಗ್ ವೆಲ್ತ್ ಸಂಸ್ಥಾಪಕ ಹರಿಪ್ರಸಾದ್ ಕೆ. ತಿಳಿಸಿದ್ದಾರೆ.

[t4b-ticker]
error: Content is protected !!