ಟೆಹ್ರಾನ್: ಅಮೆರಿಕ ಶಾಂತಿ ಮಾತುಕತೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ ಇರಾನ್ ಸಂಘರ್ಷ ಶಮನಕ್ಕೆ ಹೊಸ ದಾಳ ಉರುಳಿಸಿದೆ. ಪಾಕಿಸ್ತಾನದ ಸಂಧಾನಕಾರರ ಮೂಲಕ ಅಮೆರಿಕಕ್ಕೆ ಹೊಸ ಶಾಂತಿ ಪ್ರಸ್ತಾವನೆಯನ್ನು ರವಾನಿಸಿರುವ ಇರಾನ್, ಪ್ರಮುಖವಾಗಿ ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳಿಗೆ ಆದ್ಯತೆ ನೀಡುವಂತೆ ಕೋರಿದೆ. ಪ್ರಸ್ತುತ ನಡೆಯುತ್ತಿರುವ ಸಂಘರ್ಷವನ್ನು ತಕ್ಷಣವೇ ಕೊನೆಗೊಳಿಸಲು ಮತ್ತು ವಿಶ್ವದ ಪ್ರಮುಖ ವ್ಯಾಪಾರ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಲು ತಾವು ಸಿದ್ದ ಎಂದು ಇರಾನ್ ತಿಳಿಸಿದೆ.ಅತ್ಯಂತ ವಿವಾದಾತ್ಮಕವಾಗಿರುವ ಮತ್ತು ಸಂಘರ್ಷದ ಕೇಂದ್ರ ಬಿಂದುವಾಗಿರುವ ಪರಮಾಣು ಕಾರ್ಯಕ್ರಮದ ಕುರಿತಾದ ಚರ್ಚೆಗಳನ್ನು ಸದ್ಯಕ್ಕೆ ಬದಿಗಿಟ್ಟು, ನಂತರದ ಹಂತದಲ್ಲಿ ಮಾತುಕತೆ ನಡೆಸೋಣ ಎಂಬ ನಿಲುವನ್ನು ಇರಾನ್ ತಳೆದಿದೆ. ಈ ಮೂಲಕ ಸದ್ಯದ ಉದ್ವಿಗ್ನತೆಯನ್ನು ತಣ್ಣಗಾಗಿಸುವುದು ಇರಾನ್‌ನ ತಂತ್ರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇರಾನ್ ಈ ಹಿಂದಿನ ಪ್ರಸ್ತಾಪದಲ್ಲಿ ಅಮೆರಿಕ ವಿಧಿಸಿರುವ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕುವುದು ಮತ್ತು ಜಪ್ತಿ ಮಾಡಲಾಗಿರುವ ತನ್ನ ಆಸ್ತಿಗಳನ್ನು ಬಿಡುಗಡೆ ಮಾಡಬೇಕೆಂದು ಕೇಳಿತ್ತು. ಜಲಸಂಧಿಯನ್ನು ತೆರೆಯಬೇಕಾದರೆ ಅಮೆರಿಕವು ಇರಾನ್ ಬಂದರುಗಳ ಮೇಲೆ ಹೇರಿರುವ ನೌಕಾ ದಿಗ್ವಂಧನವನ್ನು ಮೊದಲು ಹಿಂಪಡೆಯಬೇಕು ಎಂದು ಷರತ್ತು ವಿಧಿಸಿತ್ತು.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹೊಸ ಪ್ರಸ್ತಾವನೆಯನ್ನು ಪರಿಶೀಲಿಸಲು ಇಂದು ಉನ್ನತ ಮಟ್ಟದ ಭದ್ರತಾ ಸಭೆಯನ್ನು ಕರೆದಿದ್ದಾರೆ. ಆದರೆ ಇರಾನ್ ಪರಮಾಣು ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರದೆ ಯಾವುದೇ ಶಾಶ್ವತ ಒಪ್ಪಂದಕ್ಕೆ ಅಮೆರಿಕ ಒಪ್ಪುವುದು ಅನುಮಾನ ಎನ್ನಲಾಗುತ್ತಿದೆ.ಸದ್ಯಕ್ಕೆ ಹಾರ್ಮುಜ್ ಜಲಸಂಧಿಯು ಪೂರ್ಣ ಪ್ರಮಾಣದಲ್ಲಿ ಮುಕ್ತವಾಗಿಲ್ಲ. ಇರಾನ್ ತನ್ನ ಸ್ನೇಹಿ ರಾಷ್ಟ್ರಗಳಾದ ಭಾರತ, ಚೀನಾ ಮತ್ತು ರಷ್ಯಾ ಹಡಗುಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಿದ್ದು, ಉಳಿದ ದೇಶಗಳ ಹಡಗುಗಳ ಮೇಲೆ ತೀವ್ರ ನಿಗಾ ವಹಿಸಿದೆ. ಇರಾನ್‌ನ ಈ ಹೊಸ ಪ್ರಸ್ತಾವನೆಯನ್ನು ಅಮೆರಿಕ ಹೇಗೆ ಸ್ವೀಕರಿಸುತ್ತದೆ ಎಂಬುದರ ಮೇಲೆ ಜಾಗತಿಕ ಮಾರುಕಟ್ಟೆ ಮತ್ತು ತೈಲ ಬೆಲೆಗಳ ಭವಿಷ್ಯ ನಿರ್ಧಾರವಾಗಲಿದೆ.












































