ಬೆಂಗಳೂರು: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಹಾಗೂ ಅದರ ನಾಯಕಿ ಮಮತಾ ಬ್ಯಾನರ್ಜಿ ಅವರ ಹೀನಾಯ ಸೋಲಿನ ಬಗ್ಗೆ ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ಅವರು ಪ್ರತಿಕ್ರಿಯಿಸಿದ್ದಾರೆ.
ಮಮತಾ ಅವರ ಬಗ್ಗೆ ತೀವ್ರ ಕಿಡಿಕಾರಿರುವ ಅವರು, ದೇಶದಲ್ಲಿ ಮಮತಾ ಅವರನ್ನು ಉದಾರವಾದಿ ನಾಯಕಿ, ಜಾತ್ಯಾತೀತ ಶಕ್ತಿ ಎಂದು ಬಹಳ ಜನ ತಿಳಿದುಕೊಂಡಿರುವುದು ಬಹಳ ತಪ್ಪು. ಮುಸ್ಲಿಮರನ್ನು ಮಮತಾ ಬ್ಯಾನರ್ಜಿ ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ ವಿನಃ ಅವರ ಉದ್ಧಾರಕ್ಕೆ ಶ್ರಮಿಸಿಲ್ಲ ಎಂದು ಹೇಳಿದ್ದಾರೆ.ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂರನ್ನು ನಾಗರಿಕರಂತೆ ಪರಿಗಣಿಸದೇ ಕೇವಲ ಅವರನ್ನು ಮತಬ್ಯಾಂಕ್ ಆಗಿ ನೋಡಲಾಯಿತು. ಒಂದು ವೇಳೆ ಮುಸ್ಲಿಮರನ್ನೂ ನಮ್ಮ ರಾಜ್ಯದ ನಾಗರಿಕರು ಎಂದು ತಿಳಿದುಕೊಂಡಿದ್ದರೆ ಇಂದು ಪಶ್ಚಿಮ ಬಂಗಾಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುತ್ತಿತ್ತು ಎಂದು ಹೇಳಿದ್ದಾರೆ.ಟಿಎಂಸಿ ಸೋಲಿಗೆ ಎಸ್‌ಐಆರ್ ಒಂದು ಕಾರಣವಿರಬಹುದಷ್ಟೇ, ಆದರೆ, ಕಳೆದ 15 ವರ್ಷಗಳಲ್ಲಿ ಮಮತಾ ಅವರ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರಗಳು ನಡೆದಿವೆ ಎಂದು ಅವರು ಆರೋಪಿಸಿದರು.
ಅಸ್ಸಾಂ ಫಲಿತಾಂಶದ ಬಗ್ಗೆ ಮಾತನಾಡಿದ ಓವೈಸಿ, ಅಸ್ಸಾಂನಲ್ಲಿ ಹಿಂದೂಗಳಿಗೆ ಮುಸ್ಲಿಮರ ಭಯ ತೋರಿಸಿ ಗೆಲ್ಲಲಾಗಿದೆ. ಅಷ್ಟೇ ಅಲ್ಲದೇ ಮುಸ್ಲಿಂರ ಮತದಾನದ ಹಕ್ಕನ್ನೂ ಕಸಿಯಲಾಗಿದೆ. ಇದಕ್ಕೆ ಉದಾಹರಣೆಯೇ ಅಸ್ಸಾಂನಲ್ಲಿ ಚುನಾವಣೆ ಸಮಯದಲ್ಲಿ 50 ಸಾವಿರ ಮುಸ್ಲಿಂರನ್ನು ಜಾಗ ಖಾಲಿ ಮಾಡಿಸಲಾಗಿದೆ. ಕಾಂಗ್ರೆಸ್ ಸಹ ಮುಸ್ಲಿಂ ನಾಯಕತ್ವಕ್ಕೆ ಬಲ ತುಂಬಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ 202 ಸ್ಥಾನಗಳನ್ನು ಪಡೆದು ಮಿಂಚಿದರೆ, ಟಿಎಂಸಿ 80 ಸ್ಥಾನಗಳನ್ನು ಪಡೆದು ಮುಖಭಂಗ ಅನುಭವಿಸಿದೆ. ಅಸ್ಸಾಂನಲ್ಲಿ ಬಿಜೆಪಿ 82 ಹಾಗೂ ಕಾಂಗ್ರೆಸ್ 19 ಸ್ಥಾನ ಪಡೆದಿವೆ.












































