ಒಂದೇ ಮತದ ಅಂತರ: ತಿರುಪ್ಪತ್ತೂರಿನಲ್ಲಿ ಟಿವಿಕೆ ವಿರುದ್ಧ ಡಿಎಂಕೆ ಸಚಿವ ಪೆರಿಯಕರುಪ್ಪನ್ ರಿಗೆ ಸೋಲು!

Picture of Savistara

Savistara

Bureau Report

ಮಸ್ಕತ್‌ನಿಂದ ಬಂದು ಮತ ಚಲಾಯಿಸಿದ್ದ ಟಿವಿಕೆ ಬೆಂಬಲಿಗ

ತಿರುಪ್ಪತ್ತೂರು/ಚೆನ್ನೈ: ಒಂದೇ ಮತದ ಅಂತರವು ರಾಜಕೀಯ ಭವಿಷ್ಯಕ್ಕೆ ಹೇಗೆ ತಿರುವು ನೀಡಬಹುದು ಎಂಬುದಕ್ಕೆ ತಮಿಳುನಾಡಿನ ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ ಸ್ಪಷ್ಟ ಉದಾಹರಣೆಯಾಗಿದೆ. ಡಿಎಂಕೆ ಹಿರಿಯ ನಾಯಕ ಹಾಗೂ ಸಹಕಾರ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರು ಕೇವಲ ಒಂದು ಮತದ ಅಂತರದಿಂದ ಸೋಲು ಕಂಡಿದ್ದು, ಸುಮಾರು ಎರಡು ದಶಕಗಳ ಕಾಲ ಮುಂದುವರಿದಿದ್ದ ಅವರ ಆಡಳಿತಕ್ಕೆ ತೆರೆ ಬಿದ್ದಿದೆ.ಶಿವಗಂಗಾ ಜಿಲ್ಲೆಯ ತಿರುಪ್ಪತ್ತೂರು ಕ್ಷೇತ್ರದಲ್ಲಿ ನಡೆದ ತೀವ್ರ ಪೈಪೋಟಿಯ ಮತ ಎಣಿಕೆ ಕೊನೆಯ ಸುತ್ತಿನಲ್ಲಿ ರೋಚಕ ತಿರುವು ಪಡೆದುಕೊಂಡಿತು. ಅಂತಿಮ ಸುತ್ತಿಗೆ ಮುನ್ನ 30 ಮತಗಳಿಂದ ಮುನ್ನಡೆ ಸಾಧಿಸಿದ್ದ ಪೆರಿಯಕರುಪ್ಪನ್ ಅವರನ್ನು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿ ಸೀನಿವಾಸ ಸೇತುಪತಿ ಕೊನೆಯ ಹಂತದಲ್ಲಿ ಹಿಂದಿಕ್ಕಿದರು. ಸೇತುಪತಿ 83,365 ಮತಗಳನ್ನು ಪಡೆದರೆ, ಪೆರಿಯಕರುಪ್ಪನ್ 83,364 ಮತಗಳಿಗೆ ಸೀಮಿತಗೊಂಡರು.

2006ರಿಂದ ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿದ್ದ ಪೆರಿಯಕರುಪ್ಪನ್ ಅವರಿಗೆ ಇದೇ ಮೊದಲ ಬಾರಿಗೆ ತಮ್ಮ ‘ಭದ್ರಕೋಟೆ’ಯಲ್ಲೇ ಸೋಲು ಎದುರಾದುದು ಗಮನಾರ್ಹ. ಬಿಜೆಪಿ ಅಭ್ಯರ್ಥಿ ಕೆ.ಸಿ. ತಿರುಮಾರನ್ 29,054 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು.ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯ ಸೂಚನೆ ನೀಡಿದ ಈ ಚುನಾವಣೆಯಲ್ಲಿ ನಟ-ರಾಜಕಾರಣಿ ವಿಜಯ್ ನೇತೃತ್ವದ ಟಿವಿಕೆ ಗಮನಾರ್ಹ ಸಾಧನೆ ಮಾಡಿದೆ. 234 ಸದಸ್ಯರ ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆದ್ದಿರುವ ಟಿವಿಕೆ, ಬಹುಮತದ 118 ಸ್ಥಾನಗಳಿಗೆ ಕೇವಲ 10 ಸ್ಥಾನಗಳ ಕೊರತೆಯನ್ನು ಎದುರಿಸುತ್ತಿದೆ.

ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕದ ಹಿನ್ನೆಲೆಯಲ್ಲಿ ಟಿವಿಕೆ ಕಾಂಗ್ರೆಸ್ (5), ಪಿಎಂಕೆ (4), ಎಡಪಕ್ಷಗಳು (4) ಹಾಗೂ ವಿಸಿಕೆ (2) ಸೇರಿದಂತೆ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವ ಸಾಧ್ಯತೆ ಇದೆ. ಈ ಪಕ್ಷಗಳಲ್ಲಿ ಹಲವು ಹಿಂದೆ ಡಿಎಂಕೆ ಅಥವಾ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದವು.ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಟಿವಿಕೆ ಸಾಧನೆಯನ್ನು “ಅದ್ಭುತ ಚುನಾವಣಾ ಫಲಿತಾಂಶ” ಎಂದು ಬಣ್ಣಿಸಿ, ರಾಜ್ಯದಲ್ಲಿ ಬದಲಾವಣೆಯ

ಚಿತ್ರರಂಗದಿಂದ ರಾಜಕೀಯಕ್ಕೆ ಬಂದವರ ಯಶಸ್ಸಿನ ಕುರಿತೂ ಈ ಫಲಿತಾಂಶ ಉತ್ತರ ನೀಡಿದಂತಾಗಿದೆ. ವಿಜಯ್ ಅವರು ಎನ್.ಟಿ. ರಾಮರಾವ್, ಎಂ.ಜಿ. ರಾಮಚಂದ್ರನ್ ಹಾಗೂ ಜೆ. ಜಯಲಲಿತಾ ಅವರಂತಹ ನಟ-ರಾಜಕಾರಣಿಗಳ ಸಾಲಿಗೆ ಸೇರುವ ಸೂಚನೆ ನೀಡಿದ್ದಾರೆ.ಟಿವಿಕೆ ಬೆಂಬಲಿಗ ಮತದಾರರೊಬ್ಬರು ಮತ ಚಲಾಯಿಸಲು ಮಸ್ಕತ್‌ನಿಂದ ಶಿವಗಂಗಾ ಗೆ ಬಂದಿದ್ದರು. ಅವರ ಒಂದು ಮತವೇ ಚುನಾವಣೆಯಲ್ಲಿ ನಿರ್ಣಯಕವಾಗಿರುವ ಸಾಧ್ಯತೆಯೂ ಇದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಶಿವಗಂಗಾ ಜಿಲ್ಲೆಯ ಮತದಾರ ಮಣಿಕಂಠನ್‌ ಶಿವನಾಥಂ ಅವರು “ನನ್ನ ಮತ ಚಲಾಯಿಸಲು ಮಸ್ಕತ್‌ನಿಂದ ಭಾರತಕ್ಕೆ ಬಂದಿದ್ದಕ್ಕೆ ಹೆಮ್ಮೆ ಇದೆ” ಎಂದು ಹಂಚಿಕೊಂಡಿದ್ದಾರೆ. ಅಂತಿಮ ಫಲಿತಾಂಶದ ಅಂತರ ಒಂದೇ ಮತವಾಗಿರುವ ಹಿನ್ನೆಲೆಯಲ್ಲಿ, ಈ ಪೋಸ್ಟ್ ಮಹತ್ವ ಪಡೆದುಕೊಂಡಿದೆ.

[t4b-ticker]
error: Content is protected !!