ಬೆಂಗಳೂರು: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಾರ್ಟಿ ಭರ್ಜರಿ ಯಶಸ್ಸು ಗಳಿಸಿ ಆಡಳಿತ ನಡೆಸುವುದಕ್ಕೆ ಸಿದ್ಧವಾಗಿದೆ.
ವಿಜಯ್ ಅವರ ಈ ಅಭೂತಪೂರ್ವ ಯಶಸ್ಸಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ತಮಿಳುನಾಡಿನಲ್ಲಂತೂ ವಿಜಯ್ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.ಅದೇ ರೀತಿ ಈ ಫಲಿತಾಂಶದಿಂದ ದೇಶ ವಿದೇಶದಲ್ಲಿರುವ ವಿಜಯ್ ಅವರ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.ಏತನ್ಮಧ್ಯೆ, ತಮಿಳುನಾಡು ಮೂಲದ ಹಾಗೂ ಬಿಡದಿಯಲ್ಲಿ ಮಠ ಕಟ್ಟಿಕೊಂಡು ವ್ಯಾಪಕ ಸುದ್ದಿಯಾಗಿದ್ದ ವಿವಾದಿತ ದೇವಮಾನವ ನಿತ್ಯಾನಂದ ಸಹ ವಿಜಯ್ ಅವರನ್ನು ಕೊಂಡಾಡಿದ್ದಾರೆ.
2019 ರಲ್ಲಿ ಭಾರತ ತೊರೆದು ವಿದೇಶಗಳಲ್ಲಿರುವ ನಿತ್ಯಾನಂದ ಸ್ವಾಮಿ ಬಗ್ಗೆ ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ KAILASA’s SPH NITHYANANDA ಎಂಬ ಪುಟ ಅಸ್ತಿತ್ವದಲ್ಲಿದೆ. ಇದರ ಮೂಲಕ ಅವರ ಅನುಯಾಯಿಗಳು ವಿವಾದಿತ ಸ್ವಾಮಿಯ ಸಂದೇಶಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಆ ಪುಟಕ್ಕೆ 55 ಸಾವಿರಕ್ಕೂ ಅಧಿಕ ಫಾಲೋವರ್‌ಗಳಿದ್ದಾರೆ.ನಿಮ್ಮ ನಾಯಕತ್ವದಲ್ಲಿ ತಮಿಳುನಾಡಿನ ಎಲ್ಲ ಜನರ ಕಲ್ಯಾಣ, ಸರ್ವಧರ್ಮಗಳ ಜನರ ಉದ್ದಾರ ಹಾಗೂ ನಾಡಿನ ಸಮೃದ್ಧಿಗಾಗಿ ನಿತ್ಯಾನಂದರ ಆಶೀರ್ವಾದ ಸದಾ ನಿಮ್ಮ ಮೇಲಿರಲಿದೆ ಎಂದು ತಿಳಿಸಿದ್ದಾರೆ.ಸದ್ಯ ಕೈಲಾಸ ಎಂಬ ಕಾಲ್ಪನಿಕ ದೇಶದಲ್ಲಿ (ಬೊಲಿವಿಯಾ ಬಳಿ ಖಾಸಗಿ ಜಾಗ) ನಿತ್ಯಾನಂದ ಹಾಗೂ ಅವರ ಅನುಯಾಯಿಗಳು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ನಿತ್ಯಾನಂದರಿಗೆ ಹಲವು ಬೆಂಬಲಿಗರಿದ್ದಾರೆ.ಸೋಮವಾರ ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ವಿಜಯ್ ಅವರ ಟಿವಿಕೆ 108 ಸ್ಥಾನ ಪಡೆದಿದೆ. ಡಿಎಂಕೆ 73 ಸ್ಥಾನಗಳನ್ನು ಪಡೆದು ಪರಾಭವಗೊಂಡಿದೆ.












































