ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಭಾರಿ ಬಹುಮತದೊಂದಿಗೆ ಗೆದ್ದಿದ್ದು, ಮುಖ್ಯಮಂತ್ರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಿರಿಯ ನಾಯಕ ಮತ್ತು ಹಾಲಿ ಸಿಎಂ ಮಮತಾ ಬ್ಯಾನರ್ಜಿಯವರನ್ನು ಸೋಲಿಸಿರುವ ಸುವೇಂದು ಅಧಿಕಾರಿ(Suvendu Adhikari) ಹೆಸರು ಮುಂಚೂಣಿಯಲ್ಲಿದ್ದು, ಇಂದು(ಮೇ 08) ಸಂಜೆ ನಡೆಯುವ ಶಾಸಕಾಂಗ ಸಭೆಯಲ್ಲಿ ಅವರ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಇಂದು ಕೋಲ್ಕತ್ತಾಗೆ ಭೇಟಿ ನೀಡಿದ್ದು, ಬಿಜೆಪಿ ರಾಜ್ಯ ಘಟಕದ ಜೊತೆ ಮಾತುಕತೆ ನಡೆಸಿದ್ದಾರೆ. ಶಾಸಕಾಂಗ ಸಭೆಯಲ್ಲಿ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರೆ, ನಾಳೆ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಲಿದ್ದು, ಜೊತೆಗೆ ಇಬ್ಬರು ಡಿಸಿಎಂಗಳಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಎರಡು ಡಿಸಿಎಂ ಹುದ್ದೆಗಳಲ್ಲಿ ಒಂದನ್ನು ಮಹಿಳೆಗೆ ಕೊಡಲು ಹೈಕಮಾಂಡ್ ನಿಶ್ಚಿಯಿಸಿದ್ದು, ಇತ್ತೀಚಿನ ಚುನಾವಣೆಯಲ್ಲಿ ಅಸನ್ನೋಲ್ ದಕ್ಷಿಣದಿಂದ ಗೆದ್ದ ಬಿಜೆಪಿ ನಾಯಕಿ ಅಗ್ನಿಮಿತ್ರ ಪಾಲ್ ಅವರನ್ನು ಪರಿಗಣಿಸುವ ಸಾಧ್ಯದೆ. ಎರಡನೇ ಡಿಸಿಎಂ ಆಗಿ ಉತ್ತರ ಬಂಗಾಳದಿಂದ ಮಾಜಿ ಕೇಂದ್ರ ಸಚಿವ ನಿಸಿತ್ ಪ್ರಾಮಾಣಿಕ್ ಹೆಸರು ಕೇಳಿ ಬಂದಿದೆ. ಇಲ್ಲ ಬುಡಕಟ್ಟು ಸಮುದಾಯದ ನಾಯಕನಿಗೆ ನೀಡುವ ಸಾಧ್ಯತೆ ಇದೆ.ಕೋಲ್ಕತ್ತಾದ ಹೃದಯಭಾಗದಲ್ಲಿರುವ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಅದ್ಧೂರಿ ಪ್ರಮಾಣವಚನ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಿರಿಯ ಬಿಜೆಪಿ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ













































