ಬೆಂಗಳೂರು: ವಿವಿಐಪಿ ಬಾಕ್ಸ್‌ನಲ್ಲಿ ಕೂತು ಉಚಿತವಾಗಿ ತಿಂಡಿತಿನ್ನಲು ಆರ್‌ಸಿಬಿ ಅಭಿಮಾನಿಗಳ ಭಾವನೆಯನ್ನೇ ಮಾರಿಕೊಂಡಿರಿ. ಬೆಂಗಳೂರಿನ ಜನತೆ ಈ ದ್ರೋಹವನ್ನು ಎಂದಿಗೂ ಮರೆಯುವುದಿಲ್ಲ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ಕುಮಾರಸ್ವಾಮಿ ಕೆಎಸ್‌ಸಿಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಿಂದ ಐಪಿಎಲ್ ಫೈನಲ್ ಕೈತಪ್ಪಲು ಅಸಲಿ ಕಾರಣವೇನು ಎಂಬುದನ್ನು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ನೀಡಿರುವ ಸ್ಫೋಟಕ ಹೇಳಿಕೆಯನ್ನು ಹಂಚಿಕೊಂಡು ಅವರು ಕೆಎಸ್‌ಸಿಎ ವಿರುದ್ಧ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಕ್ರೀಡಾಂಗಣದ ಸಾಮರ್ಥ್ಯದ ಬಗ್ಗೆ ಸುಳ್ಳು ಕಥೆಗಳನ್ನು ಹೇಳುತ್ತಿದ್ದರೆ, ಇತ್ತ ಬಿಸಿಸಿಐ ಸತ್ಯವನ್ನೇ ಬಿಚ್ಚಿಟ್ಟಿದೆ: ಕೇವಲ ತಮ್ಮ ವಿವಿಐಪಿ ಬಳಗಕ್ಕಾಗಿ ಬರೋಬ್ಬರಿ 10,000 ಉಚಿತ ಟಿಕೆಟ್‌ಗಳಿಗಾಗಿ ಇವರು ಬೇಡಿಕೆಯಿಟ್ಟಿದ್ದರು! ಇದರಲ್ಲಿ 900 ಟಿಕೆಟ್‌ಗಳು ಶಾಸಕರಿಗೆ ಹಾಗೂ 700 ಟಿಕೆಟ್‌ಗಳು ಸರ್ಕಾರಕ್ಕೆ ಬೇಕಿತ್ತಂತೆ. ರಿಯಾಯಿತಿ ದರದಲ್ಲಿ ಸರ್ಕಾರದಿಂದ ಜಮೀನು ಪಡೆದ ಕೆಎಸ್‌ಸಿಎ ಸವಲತ್ತುಗಳನ್ನು ಅನುಭವಿಸುತ್ತಿದೆ ಎಂದು ಆರೋಪಿಸಿದ್ದಾರೆ.ಆದರೆ, ಇಲ್ಲಿನ ವ್ಯವಸ್ಥೆ ಮಾತ್ರ ಸಾಮಾನ್ಯ ಅಭಿಮಾನಿಗಳನ್ನು ಡೈನಾಮಿಕ್ ಪ್ರೈಸಿಂಗ್ ಹೆಸರಲ್ಲಿ ಲೂಟಿ ಮಾಡುತ್ತಿದೆ. ನೀವು ಕೇವಲ ಪಂದ್ಯವನ್ನಷ್ಟೇ ಸ್ಥಳಾಂತರಿಸಿಲ್ಲ, ನಿಮ್ಮ ಲಜ್ಜೆಗೇಡಿತನವನ್ನು ಇಡೀ ದೇಶಕ್ಕೆ ಪ್ರದರ್ಶಿಸಿದ್ದೀರಿ ಎಂದು ದೂರಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣವು ಅಭಿಮಾನಿಗಳ ಆಸ್ತಿಯೇ ಹೊರತು ನಿಮ್ಮ ಖಾಸಗಿ ಪಾರ್ಟಿ ಹಾಲ್ ಅಲ್ಲ ಎಂದು ಕೆಎಸ್‌ಸಿಎ ಹಾಗೂ ರಾಜ್ಯ ಸರ್ಕಾರಕ್ಕೆ ತಿವಿದಿದ್ದಾರೆ.













































