ಅಭಾವದ ಮಧ್ಯೆ ದುಬಾರಿಯಾದ ರಸಗೊಬ್ಬರ

Picture of Savistara

Savistara

Bureau Report

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ರಸಗೊಬ್ಬರ ದರದ ಮೇಲೆಯೂ ಭಾರಿ ಪರಿಣಾಮ ಬೀರಿದೆ. ರಸಗೊಬ್ಬರದ ಅಭಾವದ ಜತೆಗೆ ದರ ಏರಿಕೆ ಆಗಿರುವುದು ರೈತ ಸಮುದಾಯಕ್ಕೆ ಬರೆ ಎಳೆದಂತಾಗಿದೆ.

ಯೂರಿಯಾ ಮತ್ತು ಡಿಎಪಿ ದರದಲ್ಲಿ ಭಾರಿ ಏರಿಕೆಯಾಗಿದ್ದರೂ ಕೇಂದ್ರ ಸರ್ಕಾರ ಭಾರಿ ಪ್ರಮಾಣದ ಸಬ್ಸಿಡಿ ನೀಡುವ ಮೂಲಕ ದರವನ್ನು ನಿಯಂತ್ರಣದಲ್ಲಿಟ್ಟಿದೆ. ಆದರೆ, ಪೋಟ್ಯಾಷ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರದ ನಿಯಂತ್ರಣ ಇರದೇ ಇರುವುದರಿಂದ ಇವುಗಳ ದರ ತಿಂಗಳಲ್ಲಿಯೇ ಎರಡು ಬಾರಿ ಏರಿಕೆಯಾಗಿದೆ.

ಕಾಂಪ್ಲೆಕ್ಸ್ ಮತ್ತು ಪೋಟ್ಯಾಷ್ ರಸಗೊಬ್ಬರ ಮೇ ತಿಂಗಳ ಆರಂಭದಲ್ಲಿ ₹1,400 (50 ಕೆ.ಜಿ. ಚೀಲ) ಇದ್ದಿದ್ದು, ಈಗಾಗಲೇ ₹1,700 ಆಗಿದೆ. ಹೊಸ ದಾಸ್ತಾನು ₹2,200ಕ್ಕೆ ಹೆಚ್ಚಳವಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದರ ಏರಿಕೆಯಲ್ಲಿ ಆಯಾ ಕಂಪನಿಗಳು ವಿಭಿನ್ನವಾಗಿ ಏರಿಕೆ ಮಾಡುತ್ತಿದ್ದು, ಮಧ್ಯಪ್ರಾಚ್ಯ ಯುದ್ಧವೇ ಇದೆಲ್ಲಕ್ಕೂ ಕಾರಣ ಎನ್ನುತ್ತಾರೆ ರಸಗೊಬ್ಬರ ತಯಾರಿಕಾ ಕಂಪನಿಯ ಪ್ರತಿನಿಧಿಗಳು.ಯೂರಿಯಾ ಮತ್ತು ಡಿಎಪಿಗೆ ಕೊಡುವ ಸಬ್ಸಿಡಿಯನ್ನು ಸರ್ಕಾರ ಏರಿಕೆ ಮಾಡಿ ದರವನ್ನು ನಿಯಂತ್ರಣದಲ್ಲಿ ಇರಿಸಿದೆಯಾದರೂ ಇದು ಬಹಳ ದಿನಗಳ ಕಾಲ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ. ಇನ್ನು, ಪೊಟ್ಯಾಷ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳಿಗೂ ಸಬ್ಸಿಡಿ ನೀಡಲಾಗುತ್ತಿದೆ. ಆದರೆ, ಇದು ಮಿತಿ ಪ್ರಮಾಣದಲ್ಲಿದ್ದು, ದರ ಏರಿಕೆಯಾದಾಗಲೆಲ್ಲ ಸಬ್ಸಿಡಿ ಏರಿಸದೆ ಇರುವುದರಿಂದ ನಿಯಂತ್ರಣ ಕಳೆದುಕೊಂಡಿದೆ. ಹೀಗಾಗಿ, ಮುಂಗಾರು ಬಿತ್ತನೆಯ ಸಿದ್ಧತೆಯಲ್ಲಿರುವ ರೈತರು ರಸಗೊಬ್ಬರ ಏರಿಕೆ ಮತ್ತು ಅಭಾವದಿಂದ ತತ್ತರಿಸಿ ಹೋಗಿದ್ದಾರೆ.

ಎಫ್‌ಐಡಿ ಕಡ್ಡಾಯ:

ಯೂರಿಯಾ ಮತ್ತು ಇತರೆ ರಸಗೊಬ್ಬರ ಕೊಳ್ಳಲು ಈಗ ಎಫ್‌ಐಡಿ (ರೈತರ ಗುರುತಿನ ಸಂಖ್ಯೆ) ಕಡ್ಡಾಯ. ಎಫ್‌ಐಡಿ ಹೊಂದಿದ ರೈತರಿಗೆ, ‘ಕೆ ಕಿಸಾನ್’ ಆಯಪ್ ಮೂಲಕ ನೋಂದಣಿ ಮಾಡಿ, ಎಕರೆಗೆ ಕೇವಲ 1 ಚೀಲ ಮಾತ್ರ ನೀಡಲಾಗುತ್ತದೆ. ಇದಕ್ಕಿಂತ ಹೆಚ್ಚಿಗೆ ಖರೀದಿ ಮಾಡಲು ಸಾಧ್ಯವಿಲ್ಲ. ಎಫ್‌ಐಡಿಯಲ್ಲಿ ನೋಂದಣಿ ಮಾಡಿಯೇ ಕೊಡಬೇಕಾಗಿದ್ದರಿಂದ ಎಲ್ಲಿಯೇ ಖರೀದಿ ಮಾಡಿದರೂ ಅದು ಎಕರೆಗೆ ಒಂದು ಚೀಲ ಖರೀದಿಯಾಗುತ್ತಿದ್ದಂತೆ ಲಾಕ್ ಆಗುತ್ತದೆ. ಇನ್ನು, 20 ಎಕರೆಗಿಂತಲೂ ಹೆಚ್ಚು ಭೂಮಿ ಇದ್ದ ರೈತರು, ಬೆಳೆ ದೃಢೀಕರಣ ಪ್ರಮಾಣ ಪತ್ರ ನೀಡಿ, ಹೆಚ್ಚುವರಿಯಾಗಿ ಯೂರಿಯಾ ರಸಗೊಬ್ಬರ ಪಡೆಯಬಹುದಾಗಿದೆ.

ಗೊಬ್ಬರ ಕಳೆದ ವರ್ಷ ಈ ವರ್ಷ

ಪೊಟ್ಯಾಷ್ ₹1800 – ₹1975

ಡಿಎಪಿ ₹1350 – ₹1350

ಎನ್ ಪಿ ಕೆ ₹1350 – ₹1550

10.26.26 ₹2025 – ₹2250

14 35 14 ₹2175 – ₹2400

ಸಬ್ಸಿಡಿ ಯಾವುದಕ್ಕೆ ಎಷ್ಟೆಷ್ಟು. (ಪ್ರತಿ ಚೀಲಕ್ಕೆ).

ಡಿ ಎ ಪಿ ₹1490

ಎನ್‌ಪಿಕೆ ₹1045

ಎಂ ಎ ಪಿ ₹1484

ಯೂರಿಯಾ ₹1900 (45 ಕೆಜಿ)

ಪ್ರಸ್ತುತ ಮುಂಗಾರು ಹಂಗಾಮು ಆರಂಭವಾಗುತ್ತಿದ್ದು, ಬಿತ್ತನೆ ಕಾರ್ಯದಲ್ಲಿ ತೊಡಗಿರುವ ರೈತರಿಗೆ ರಸಗೊಬ್ಬರ ಅತ್ಯಗತ್ಯವಾಗಿದೆ. ಆದರೆ ಕೈಗೆಟುಕದ ದರ ಮತ್ತು ಮಾರುಕಟ್ಟೆಯಲ್ಲಿ ಉಂಟಾಗಿರುವ ಅಭಾವದಿಂದಾಗಿ ರೈತರು ತತ್ತರಿಸಿದ್ದಾರೆ. ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಪೋಟ್ಯಾಷ್ ಮತ್ತು ಕಾಂಪ್ಲೆಕ್ಸ್ ಗೊಬ್ಬರಗಳಿಗೂ ಹೆಚ್ಚುವರಿ ಸಬ್ಸಿಡಿ ಪ್ರಕಟಿಸುವ ಮೂಲಕ ಮುಂಗಾರು ಬಿತ್ತನೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂಬ ಆಗ್ರಹ ರೈತ ವಲಯದಿಂದ ಕೇಳಿಬರುತ್ತಿದೆ.

News Updates

ಮಂಗಳೂರು : ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ₹11.63 ಕೋ ರೂ. ಅಧಿಕ ಅನುದಾನ ಮಂಜೂರು | ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ : ಸಂಸದ ಕ್ಯಾ.ಬ್ರಿಜೇಶ್ ಚೌಟ

[t4b-ticker]
error: Content is protected !!