ಪೆನ್ಸಿಲ್ವೇನಿಯಾ: 2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪರಗೈ ವಿರುದ್ಧ ಫ್ರಾನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿರುವ ಕೈಲಿಯನ್ ಎಂಬಾಪೆ, ಮೆಸ್ಸಿ ಹೆಸರಲ್ಲಿರುವ ಸಾರ್ವಕಾಲಿಕ ಗೋಲು ದಾಖಲೆಯ ಹೊಸ್ತಿಲಿಗೆ ಬಂದು ನಿಂತಿದ್ದಾರೆ.
ಶನಿವಾರ ನಡೆದ ರೋಚಕ ಹಣಾಹಣಿಯಲ್ಲಿ ಫ್ರಾನ್ಸ್ 1-0 ಗೋಲಿನಿಂದ ಪರಾಗ್ಲೆ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿತು.ಪಂದ್ಯದ 70ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲು ಆಗಿ ಪರಿವರ್ತಿಸಿದ ಫ್ರಾನ್ಸ್ ನಾಯಕ ಎಂಬಾಷೆ, ಪ್ರಸಕ್ತ ಸಾಗುತ್ತಿರುವ ಟೂರ್ನಿಯಲ್ಲಿ ತಮ್ಮ 7ನೇ ಗೋಲು ದಾಖಲಿಸಿದ್ದಾರೆ.ಆ ಮೂಲಕ 2026ರ ವಿಶ್ವಕಪ್‌ನ ‘ಗೋಲ್ಡನ್ ಬೂಟ್’ ರೇಸ್‌ನಲ್ಲಿ ಅರ್ಜೆಂಟೀನಾದ ತಾರೆ ಲಯೊನೆಲ್ ಮೆಸ್ಸಿ ಅವರೊಂದಿಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
ಮೆಸ್ಸಿ-ಎಂಬಾಪೆ ನಡುವೆ ಜಿದ್ದಾಜಿದ್ದಿನ ಪೈಪೋಟಿ:
ಕೇವಲ 24 ತಾಸಿನ ಹಿಂದೆಯಷ್ಟೇ ಕೇಪ್ ವರ್ಡ್ ವಿರುದ್ಧ ಮೆಸ್ಸಿ ತಮ್ಮ ವಿಶ್ವಕಪ್ ವೃತ್ತಿಜೀವನದ 20ನೇ ಗೋಲು ಗಳಿಸಿ ಸಾರ್ವಕಾಲಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.ಆದರೆ, ಎಂಬಾಪೆ ಕೇವಲ 19 ವಿಶ್ವಕಪ್ ಪಂದ್ಯಗಳಿಂದಲೇ 19 ಗೋಲುಗಳನ್ನು ಬಾರಿಸಿ, ಮೆಸ್ಸಿ (29 ಪಂದ್ಯಗಳಲ್ಲಿ 20 ಗೋಲು) ಅವರ ದಾಖಲೆ ಮುರಿಯಲು ಕೇವಲ ಒಂದು ಹೆಜ್ಜೆ ಬಾಕಿ ಇದೆ. 28 ವರ್ಷದ ಎಂಬಾಪೆ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದು, ಮುಂಬರುವ ಪಂದ್ಯಗಳಲ್ಲಿ ಈ ದಾಖಲೆ ಮುರಿಯುವ ಸಾಧ್ಯತೆ ದಟ್ಟವಾಗಿದೆ.ಒಂದು ವೇಳೆ ಟೂರ್ನಿಯ ಅಂತ್ಯಕ್ಕೆ ಎಂಬಾಪೆ ಮತ್ತು ಮೆಸ್ಸಿ ಸಮಾನ ಗೋಲುಗಳನ್ನು ಹೊಂದಿದ್ದರೂ, ಅಸಿಸ್ಟ್ (ಗೋಲು ಗಳಿಸಲು ನೆರವಾಗುವುದು) ನಿಯಮದ ಆಧಾರದ ಮೇಲೆ ಎಂಬಾಪೆ (2 ಅಸಿಸ್ಟ್) ಸದ್ಯ ಮೆಸ್ಸಿಗಿಂತ (1 ಅಸಿಸ್ಟ್) ಮುಂದಿದ್ದಾರೆ. ಗೋಲ್ಡನ್ ಬೂಟ್ ರೇಸ್‌ನಲ್ಲಿ ನಾರ್ವೆಯ ಅರ್ಲಿಂಗ್ ಹಾಲೆಂಡ್ ಮತ್ತು ಇಂಗ್ಲೆಂಡ್‌ನ ಹ್ಯಾರಿ ಕೇನ್ ತಲಾ 5 ಗೋಲುಗಳೊಂದಿಗೆ ತೀವ್ರ ಪೈಪೋಟಿ ಒಡ್ಡುತ್ತಿದ್ದಾರೆ.ಜುಲೈ 9 ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವು ಮೊರಕ್ಕೊ ಸವಾಲನ್ನು ಎದುರಿಸಲಿದೆ.
ನಾಕೌಟ್ ಹಂತದಲ್ಲಿ ಗರಿಷ್ಠ ಗೋಲು ದಾಖಲೆ…
ಫಿಫಾ ವಿಶ್ವಕಪ್‌ನ ನಾಕೌಟ್ ಹಂತದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ದಾಖಲೆಗೂ ಕೈಲಿಯನ್ ಎಂಬಾಪೆ ಭಾಜನರಾಗಿದ್ದಾರೆ. ಈಗಾಗಲೇ 10 ನಾಕೌಟ್ ಪಂದ್ಯಗಳಲ್ಲಿ 11 ಗೋಲುಗಳನ್ನು ದಾಖಲಿಸಿದ್ದಾರೆ. ಈ ಪಟ್ಟಿಯಲ್ಲಿ ಬ್ರೆಜಿಲ್‌ನ ದಂತಕಥೆ ರೊನಾಲ್ಲೊ ಎರಡನೇ (8 ಗೋಲು) ಸ್ಥಾನದಲ್ಲಿದ್ದಾರೆ.ಮೂರು ವಿಭಿನ್ನ ವಿಶ್ವಕಪ್‌ಗಳಲ್ಲಿ ಮೂರು ಅಥವಾ ಅಂದಕ್ಕಿಂತಲೂ ಹೆಚ್ಚು ಗೋಲು ಗಳಿಸಿದ ಏಕಮಾತ್ರ ಆಟಗಾರ ಎಂಬ ಖ್ಯಾತಿಗೂ ಎಂಬಾಪೆ ಭಾಜನರಾಗಿದ್ದಾರೆ.
ಫ್ರಾನ್ಸ್ 150 ಗೋಲು ದಾಖಲೆ…
ಫಿಫಾ ವಿಶ್ವಕಪ್‌ನಲ್ಲಿ ಫ್ರಾನ್ಸ್ 150 ಗೋಲುಗಳ ದಾಖಲೆ ಬರೆದಿದೆ. ಬ್ರೆಜಿಲ್, ಜರ್ಮನಿ, ಅರ್ಜೆಂಟೀನಾ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ತಂಡವೆನಿಸಿದೆ.ಅಲ್ಲದೆ ಫಿಫಾ ವಿಶ್ವಕಪ್‌ನಲ್ಲಿ ಫ್ರಾನ್ಸ್ ತಂಡವು ಇದೇ ಮೊದಲ ಬಾರಿಗೆ ಸತತ ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.











































