ಕೋಲ್ಕತ್ತ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ನಾಲ್ಕು ದಿನಗಳ ಪ್ರವಾಸದ ಭಾಗವಾಗಿ ಭಾರತಕ್ಕೆ ಆಗಮಿಸಿದ್ದಾರೆ. ಪ್ರವಾಸದ ಮೊದಲ ಹಂತವಾಗಿ ಅವರು ಕೋಲ್ಕತ್ತಕ್ಕೆ ಭೇಟಿ ನೀಡಿದ್ದಾರೆ.
ಕೋಲ್ಕತ್ತಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯೊಬ್ಬರು ಭೇಟಿ ನೀಡುತ್ತಿರುವುದು 14 ವರ್ಷಗಳ ನಂತರ ಇದೇ ಮೊದಲು.
ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೂಲಕ ಐತಿಹಾಸಿಕ ರಾಜಕೀಯ ಬದಲಾವಣೆ ಕಂಡ ಕೆಲವೇ ವಾರಗಳಲ್ಲಿ ಈ ಭೇಟಿ ನಡೆದಿರುವುದು ವಿಶೇಷ.’ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಕೋಲ್ಕತ್ತಕ್ಕೆ ಬಂದಿಳಿದಿದ್ದಾರೆ. ಇದು ಅವರ ಮೊದಲ ಭಾರತ ಪ್ರವಾಸವಾಗಿದೆ. ಇಂದು ಮಧ್ಯಾಹ್ನ ನಾವು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದೇವೆ. ಮುಂದಿನ ಕೆಲವು ದಿನಗಳಲ್ಲಿ ವ್ಯಾಪಾರ, ತಂತ್ರಜ್ಞಾನ, ರಕ್ಷಣೆ, ಕ್ವಾಡ್ ಮತ್ತು ಇತರ ಹಲವು ವಿಷಯಗಳ ಕುರಿತು ಚರ್ಚೆ ನಡೆಸುವ ಮೂಲಕ ಪ್ರಗತಿ ಸಾಧಿಸಲಿದ್ದೇವೆ’ ಎಂದು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಸೆರ್ಗಿಯೊ ಗೊರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.2012ರ ಮೇನಲ್ಲಿ ಹಿಲರಿ ಕ್ಲಿಂಟನ್ ಭೇಟಿ ನೀಡಿದ ನಂತರ, ಕೋಲ್ಕತ್ತಕ್ಕೆ ಬಂದಿರುವ ಮೊದಲ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಆಗಿದ್ದಾರೆ.
ಮಾರ್ಕೊ ರೂಬಿಯೊ ಅವರು ಕೋಲ್ಕತ್ತದಲ್ಲಿರುವ ಸೇಂಟ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಯ ಪ್ರಧಾನ ಕಚೇರಿಯಾದ ‘ಮದರ್ ಹೌಸ್’ ಮತ್ತು ಬಾಲಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.ಮೇ 23ರಿಂದ 26ರವರೆಗೆ ನಿಗದಿಯಾಗಿರುವ ರೂಬಿಯೊ ಅವರು ಭಾರತ ಪ್ರವಾಸದ ವೇಳೆ ಕೋಲ್ಕತ್ತ ಸೇರಿದಂತೆ ಆಗ್ರಾ, ಜೈಪುರ ಮತ್ತು ದೆಹಲಿಗೆ ಭೇಟಿ ನೀಡಲಿದ್ದಾರೆ. ಭಾರತದೊಂದಿಗಿನ ಇಂಧನ ಮಾತುಕತೆ ಮತ್ತು ಕ್ವಾಡ್ ಒಕ್ಕೂಟದ ರಾಷ್ಟ್ರಗಳ ಸಚಿವರ ಸಭೆಯ ಹಿನ್ನೆಲೆಯಲ್ಲಿ ಈ ಪ್ರವಾಸ ರಾಜತಾಂತ್ರಿಕವಾಗಿ ಅತ್ಯಂತ ಮಹತ್ವದ್ದಾಗಿದೆ.ಭಾರತ ಪ್ರವಾಸ ಕೈಗೊಳ್ಳುವ ಮುನ್ನ ಮಿಯಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೂಬಿಯೊ, ‘ಭಾರತ ನಮ್ಮ ಉತ್ತಮ ಪಾಲುದಾರ ದೇಶವಾಗಿದೆ. ನಾವು ಅವರಿಗೆ (ಭಾರತಕ್ಕೆ) ಬೇಕಾಗುವಷ್ಟು ಇಂಧನ ಮಾರಾಟ ಮಾಡಲು ಬಯಸುತ್ತೇವೆ. ಅಮೆರಿಕದ ಇಂಧನ ಉತ್ಪಾದನೆ ಮತ್ತು ರಫ್ತು ಈಗ ಐತಿಹಾಸಿಕ ಮಟ್ಟದಲ್ಲಿದೆ ಎಂಬುದನ್ನು ನೀವು ಈಗಾಗಲೇ ನೋಡಿದ್ದೀರಿ’ ಎಂದು ಹೇಳಿದ್ದರು.
ದೆಹಲಿಯಲ್ಲಿ ಮೇ 26ರಂದು ಕ್ವಾಡ್ ಸಭೆ ನಡೆಯಲಿದ್ದು, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಮಾರ್ಕೊ ರೂಬಿಯೊ, ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಮತ್ತು ಜಪಾನ್ ವಿದೇಶಾಂಗ ಸಚಿವ ತೋಷಿಮಿಟ್ಸು ಮೊಟೆಗಿ ಭಾಗವಹಿಸಲಿದ್ದಾರೆ.













































