ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಾನ ಕಲಬುರಗಿ ಸೇರಿದಂತೆ ಇತರ ಭಾಗದಲ್ಲಿ ಮುಂಗಾರು ಮಳೆ ವಿಳಂಬವಾದ ಹಿನ್ನೆಲೆಯಲ್ಲಿ ಭಾಗದ ಬರ ಅಧ್ಯಯನ ಕುರಿತು ವಿಭಾಗ ಮಟ್ಟದ ಸಭೆ ನಡೆಸಲು ಕಲಬುರಗಿಗೆ ಆಗಮಿಸಿದ ಸಿಎಂ ಡಿ ಕೆ ಶಿವಕುಮಾರ್ ಅವರು ನಗರದ ಸರಕಾರಿ ಅತಿಥಿ ಗೃಹದಲ್ಲಿ ಮಂಗಳವಾರ ಬೆಳಗ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.ವಿವಿಧ ರೈತ ಪರ ಸಂಘಟನೆಗಳು, ಕಬ್ಬು ಬೆಳೆಗಾರರು ಸಂಘದ ಮುಖಂಡರು ಸೇರಿದಂತೆ ಹಲವಾರು ರೈತರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮನವಿ ಪತ್ರ ನೀಡಿ ತಮ್ಮ ಕುಂದು ಕೊರತೆಗಳನ್ನು ತಿಳಿಸಿದರು. ರೈತರ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್,ರೈತರ ಸಾಲಮನ್ನಾ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸಲಿದ್ದು, ಎಲ್ಲ ಅಂಶಗಳನ್ನು ಅಧ್ಯಯನ ಮಾಡಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿನ ಬರಗಾಲ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳ ಕುರಿತು ಸಮಗ್ರ ಪರಾಮರ್ಶೆ ನಡೆಸಲಾಗುತ್ತಿದೆ. ಕಲಬುರಗಿ ವಿಭಾಗದ ಅಧಿಕಾರಿಗಳ ಸಭೆ ಇಂದು ನಡೆಯುತ್ತಿದ್ದು, ಮುಂದಿನ ಎರಡು-ಮೂರು ದಿನಗಳಲ್ಲಿ ಬೆಳಗಾವಿಗೆ ತೆರಳಿ ಅಲ್ಲಿನ ಪರಿಸ್ಥಿತಿಯ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು. ರೈತರ ಸಾಲಮನ್ನಾ ಕುರಿತ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಯಾರ ಸಾಲ, ಯಾವ ರೀತಿಯ ಸಾಲ, ಎಷ್ಟು ಪ್ರಮಾಣದ ಸಾಲ ಎಂಬ ಎಲ್ಲ ಅಂಶಗಳನ್ನು ಪರಿಶೀಲಿಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಸರ್ಕಾರ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ ಸೂಕ್ತ ತೀರ್ಮಾನ ಮಾಡಲಿದೆ ಎಂದು ಹೇಳಿದರು.











































