ನವದೆಹಲಿ: ಪಶ್ಚಿಮ ಬಂಗಾಳದ ಮೂರು ರಾಜ್ಯಸಭಾ ಸ್ಥಾನಗಳಿಗೆಉಪಚುನಾವಣೆ ಜುಲೈ 24ರಂದು ನಡೆಯಲಿದ್ದು, ಇದರ ಫಲಿತಾಂಶವು ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎಯನ್ನು ಮೇಲ್ಮನೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಹತ್ತಿರ ತರಲಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪರಾಭವ ಅನುಭವಿಸಿದ ಬಳಿಕ ಜೂನ್ 8 ಮತ್ತು 10ರ ನಡುವೆ ಪಕ್ಷದ ರಾಜ್ಯಸಭಾ ಸದಸ್ಯರಾದ ಸುಖೇಂದು ಶೇಖರ್ ರೇ, ಸುಷ್ಮತಾ ದೇವ್ ಮತ್ತು ಪ್ರಕಾಶ್ ಚಿಕ್ ಬಾರಿಕ್ ರಾಜೀನಾಮೆ ನೀಡಿದ್ದರು. ಹೀಗಾಗಿ, ಉಪಚುನಾವಣೆ ನಡೆಯುತ್ತಿದೆ.ಈ ರಾಜೀನಾಮೆಯಿಂದಾಗಿ ರಾಜ್ಯಸಭೆಯಲ್ಲಿ ತೃಣಮೂಲ ಪಕ್ಷದ ಸದಸ್ಯರ ಸಂಖ್ಯೆ ಹತ್ತಕ್ಕೆ ಇಳಿದಿದೆ. ರೇ ಮತ್ತು ಬಾರಿಕ್ ಅವರ ಅಧಿಕಾರಾವಧಿ 2029ರ ಆಗಸ್ಟ್ 18ರ ವರೆಗೆ ಇತ್ತು. ದೇವ್ ಅವರ ಅಧಿಕಾರಾವಧಿ 2030ರ ಏಪ್ರಿಲ್ 2ರಂದು ಮುಗಿಯಲಿತ್ತು.ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಪ್ರಸ್ತುತ 293 ಸದಸ್ಯರಿದ್ದಾರೆ. ಒಂದು ಸ್ಥಾನ ಖಾಲಿ ಇದೆ. 207 ಶಾಸಕರನ್ನು ಹೊಂದಿರುವ ಬಿಜೆಪಿಯು ಮೂರು ಸ್ಥಾನಗಳನ್ನು ಸುಲಭದಲ್ಲಿ ಗೆಲ್ಲಲಿದೆ. ಆದರೆ, ವಿಭಜಿತ ತೃಣಮೂಲ ಕಾಂಗ್ರೆಸ್ ಒಟ್ಟು 80 ಶಾಸಕರನ್ನು ಹೊಂದಿದೆ – ಸುಮಾರು 65 ಶಾಸಕರು ಋತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಗುಂಪಿನಲ್ಲಿದ್ದಾರೆ ಮತ್ತು ಉಳಿದವರು ಮಮತಾ ಅವರೊಂದಿಗೆ ಇದ್ದಾರೆ. ತೃಣಮೂಲದ ಎರಡೂ ಬಣಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತವೆಯೇ ಎಂಬುದನ್ನು ಕಾದು ನೋಡಬೇಕು.
ಈ ಚುನಾವಣಾ ಫಲಿತಾಂಶವು ಬಿಜೆಪಿ ಪಾಳಯಕ್ಕೆ ಹರ್ಷ ತರಲಿದೆ. ಏಕೆಂದರೆ, ಈ ಫಲಿತಾಂಶವು ಮೇಲ್ಮನೆಯಲ್ಲಿ ಎನ್‌ಡಿಎ ಸಂಖ್ಯಾಬಲವನ್ನು 154ಕ್ಕೆ ಕೊಂಡೊಯ್ಯುತ್ತದೆ. ಮೇಲ್ಮನೆಯಲ್ಲಿ ಮೂರನೇ ಎರಡರಷ್ಟು ಬಹುಮತಕ್ಕೆ ಕೇವಲ ಒಂಬತ್ತು ಸಂಖ್ಯೆ ಕಡಿಮೆ ಆಗಲಿದೆ. ಕೇಂದ್ರ ಸರ್ಕಾರವು ಮುಂಬರುವ ಅಧಿವೇಶನದಲ್ಲಿ ಸಂವಿಧಾನ ತಿದ್ದುಪಡಿ ಮಾಡುವ ಕೆಲವು ಮಸೂದೆಗಳನ್ನು ತರಲು ಉದ್ದೇಶಿಸಿದೆ.245 ಸದಸ್ಯರ ಸದನದಲ್ಲಿ ಬಿಜೆಪಿ ಸದ್ಯ 114 ಸದಸ್ಯರನ್ನು ಹೊಂದಿದೆ. ಮೇಲ್ಮನೆಯಲ್ಲಿ ಸರಳ ಬಹುಮತಕ್ಕೆ 123 ಸದಸ್ಯ ಬಲದ ಅಗತ್ಯ ಇದೆ.ಪ್ರಸ್ತುತ ಎನ್‌ಡಿಎಯಲ್ಲಿ ಏಳು ನಾಮನಿರ್ದೇಶಿತ ಸಂಸದರು ಮತ್ತು ಮೂವರು ಪಕ್ಷೇತರರು ಸೇರಿದಂತೆ 151 ಸಂಸದರಿದ್ದಾರೆ. ಆದರೆ ಇಂಡಿಯಾ ಮೈತ್ರಿಕೂಟದ ಸದಸ್ಯರ ಸಂಖ್ಯೆ 64ಕ್ಕೆ ಇಳಿದಿದೆ. ಡಿಎಂಕೆಯ 8, ಬಿಜೆಡಿಯ 5 ಮತ್ತು ಎಎಪಿಯ 3 ಸೇರಿದಂತೆ 27 ಅಲಿಪ್ತ ಸಂಸದರಿದ್ದಾರೆ. ಅವರಲ್ಲಿ ಕನಿಷ್ಠ 19 ಮಂದಿ ಬಿಜೆಪಿಯನ್ನು ವಿರೋಧಿಸಲು ಒಲವು ತೋರುತ್ತಿದ್ದಾರೆ.












































