ಮಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಿಂದ ಗುಜರಾತ್‌ಗೆ ಅಡಿಕೆ ಸಾಗಾಟ ಮಾಡುವಲ್ಲಿ ಮಹಾರಾಷ್ಟ್ರದಲ್ಲಿ ಎದುರಾಗಿದ್ದ ತಾಂತ್ರಿಕ ಅಡಚಣೆಗಳು ಮತ್ತು ಬಿಕ್ಕಟ್ಟು ಈಗ ಬಹುತೇಕ ಶಮನಗೊಂಡಿದೆ. ಕೇಂದ್ರ ಸಚಿವರು ಮತ್ತು ಸ್ಥಳೀಯ ಸಂಸದರ ಸಕಾಲಿಕ ಹಸ್ತಕ್ಷೇಪದಿಂದಾಗಿ ಅಡಿಕೆ ಲಾರಿಗಳ ಸಂಚಾರಕ್ಕೆ ಇದ್ದಅಡೆತಡೆಗಳು ನಿವಾರಣೆಯಾಗಿವೆ.
ನಾಯಕರ ಹಸ್ತಕ್ಷೇಪ ಮತ್ತು ಸಿಎಂ ಆದೇಶ:ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ಅವರಿಗೆ ಈ ಸಮಸ್ಯೆಯ ಕುರಿತು ಮನವರಿಕೆ ಮಾಡಿಕೊಟ್ಟಿದ್ದರು. ಇದರ ಫಲವಾಗಿ, ಸೂಕ್ತ ದಾಖಲೆಗಳಿರುವ ಅಡಿಕೆ ಲಾರಿಗಳನ್ನು ತಡೆಹಿಡಿಯಬಾರದು ಮತ್ತು ಜಪ್ತಿ ಮಾಡಬಾರದು ಎಂದು ಮಹಾರಾಷ್ಟ್ರ ಸಿಎಂ ಈಗಾಗಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಸಚಿವ ವಿ. ಸೋಮಣ್ಣ ಅವರ ಮೂಲಕವೂ ಶಿವಮೊಗ್ಗ ಭಾಗದ ವರ್ತಕರು ಒತ್ತಡ ಹೇರಿದ್ದರು.
ಮಾರುಕಟ್ಟೆ ಚೇತರಿಕೆಯ ನಿರೀಕ್ಷೆ:ಸಾಗಾಟದ ಸಮಸ್ಯೆಯಿಂದಾಗಿ ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಮಾರುಕಟ್ಟೆ ಸ್ತಬ್ದಗೊಂಡಿತ್ತು ಮತ್ತು ಧಾರಣೆ ಇಳಿಕೆಯಾಗುವ ಭೀತಿ ಎದುರಾಗಿತ್ತು. ಈಗ ಸಮಸ್ಯೆ ಇತ್ಯರ್ಥಗೊಂಡಿರುವುದರಿಂದ ಸರಕು ಸಾಗಣೆ ಕಂಪೆನಿಗಳು ಮತ್ತೆ ಕಾರ್ಯಾರಂಭ ಮಾಡಿವೆ. “ಇನ್ನು ಕೆಲವು ದಿನಗಳಲ್ಲಿ ಅಡಿಕೆ ವಹಿವಾಟು ಸಂಪೂರ್ಣವಾಗಿ ಸಹಜಸ್ಥಿತಿಗೆ ಮರಳಲಿದೆ” ಎಂದು ಜಿಲ್ಲಾ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮೂಡಾಯೂರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












































