ರೈಲು, ವಿಮಾನ ಸೇವೆ ವ್ಯತ್ಯಯ: ಮುಂಬೈ, ಪುಣೆ ಕಡೆ ತೆರಳುವ ಮುನ್ನ ಎಚ್ಚರ ವಹಿಸಿ…

Picture of Savistara

Savistara

Bureau Report

ಮುಂಬೈ: ಮಹಾರಾಷ್ಟ್ರದ ಮುಂಬೈ, ಪುಣೆ, ನಾಗುರ ಸೇರಿದಂತೆ ಗೋವಾ ಮತ್ತು ಗುಜರಾತ್‌ನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಅಲ್ಲದೇ ರಸ್ತೆ, ರೈಲು ಹಾಗೂ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.

ಭಾರಿ ಮಳೆಯಿಂದಾಗಿ ಮುಂಬೈ-ಪುಣೆ ಹೆದ್ದಾರಿ ಹಾಗೂ ಹಳೆಯ ಮುಂಬೈ-ಪುಣೆ ಹೆದ್ದಾರಿಯಲ್ಲಿ ಸರಣಿ ಭೂಕುಸಿತ ಸಂಭವಿಸಿದ್ದು, ವಾಹನ ಸಂಚಾರವನ್ನು ಸೋಮವಾರ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಮುಂಬೈ-ಪುಣೆಗೆ ಪ್ರಯಾಣಿಸಬೇಡಿ..

ಪರಿಸ್ಥಿತಿ ಗಂಭೀರವಾಗಿರುವುದರಿಂದ ಯಾರೂ ಮುಂಬೈ ಮತ್ತು ಪುಣೆ ನಡುವೆ ಸದ್ಯಕ್ಕೆ ಪ್ರಯಾಣ ಬೆಳೆಸಬೇಡಿ. ನಿಮ್ಮ ಪ್ರಯಾಣವನ್ನು ಮುಂದೂಡಿ ಎಂದು ಮಹಾರಾಷ್ಟ್ರ ರಸ್ತೆ ಅಭಿವೃದ್ಧಿ ನಿಗಮ (MSRDC) ಜನರಲ್ಲಿ ಮನವಿ ಮಾಡಿದೆ.

ಹೆದ್ದಾರಿಯಲ್ಲಿ ಸರಣಿ ಭೂಕುಸಿತ:

ಕರ್ಜತ್- ಲೋನಾವಾಲನಡುವಿನ ಭೋರ್ ಘಾಟ್ ಸೆಕ್ಷನ್‌ನಲ್ಲಿ ಭಾರಿ ಪ್ರಮಾಣದ ಮಣ್ಣು ಮತ್ತು ಬಂಡೆಗಳು ರಸ್ತೆಗೆ ಉರುಳಿವೆ. ಮುಂಬೈನಿಂದ ಪುಣೆಗೆ ಹಾಗೂ ಪುಣೆಯಿಂದ ಮುಂಬೈಗೆ ಸಾಗುವ ಎರಡೂ ಬದಿಯ ರಸ್ತೆಗಳನ್ನು ಸದ್ಯಕ್ಕೆ ಬಂದ್ ಮಾಡಲಾಗಿದೆ.

ಮುಖ್ಯಮಂತ್ರಿ ಮಾಹಿತಿ

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಭೂಕುಸಿತ ಸಂಭವಿಸಿದೆ. ರಸ್ತೆಯನ್ನು ಮುಕ್ತಗೊಳಿಸಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಿಳಿಸಿದ್ದಾರೆ.

ಮುಂಬೈ-ಗೋವಾ ಹೆದ್ದಾರಿ ಬಂದ್‌:

ಕಶೇದಿ ಘಾಟ್ ಬಳಿ ಭಾನುವಾರ ಮಧ್ಯರಾತ್ರಿ ಸಂಭವಿಸಿದ ಭೂಕುಸಿತದಿಂದಾಗಿ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲೂ ಸಂಚಾರ ಸ್ಥಗಿತಗೊಂಡಿದೆ.ಮುಂಬೈ ಹಾಗೂ ಪುಣೆ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಹೆದ್ದಾರಿ, ರೈಲು ಮಾರ್ಗಗಳಲ್ಲಿ ಸಂಚಾರ ವ್ಯತ್ಯಯಗೊಂಡಿತ್ತು. ಪುಣೆ-ಮುಂಬೈ ಹೆದ್ದಾರಿ ಮತ್ತು ಹಳೆಯ ಪುಣೆ- ಮುಂಬೈ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಸೋಮವಾರ ನಿರ್ಬಂಧಿಸಲಾಗಿದೆ.

ರೈಲು ಸಂಚಾರ ಸ್ಥಗಿತ:37ಕರ್ಜತ್- ಲೋನಾವಾಲ ಭೋರ್ ಘಾಟ್ ವಿಭಾಗದಲ್ಲಿ ಭೂಕುಸಿತ ಸಂಭವಿಸಿದ್ದು, ಮುಂಬೈ- ಪುಣೆ ಮಾರ್ಗದಲ್ಲಿ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಲೋಜಿ ಮತ್ತು ದೋಲಾವಲಿ ನಿಲ್ದಾಣಗಳ ನಡುವಿನ ಹಳಿಗಳ ಮೇಲಿನ ಜಲ್ಲಿಕಲ್ಲುಗಳು ಕೊಚ್ಚಿಹೋಗಿವೆ. ರಾಯಗಢ ಜಿಲ್ಲೆಯ ಕರ್ಜತ್ ಮತ್ತು ಖೋಪೋಲಿ ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ವಿಮಾನ ಹಾರಾಟ ಸ್ಥಗಿತ:ಹವಾಮಾನ ವೈಪರೀತ್ಯದಿಂದಾಗಿ ಮುಂಬೈ-ಪುಣೆ- ನಾಗುರ ಮಾರ್ಗದ ವಿಮಾನಗಳ ಹಾರಾಟವನ್ನು ಸೋಮವಾರ ಸ್ಥಗಿತಗೊಳಿಸಲಾಗಿದೆ.

ಭಾರಿ ಮಳೆ ಕಾರಣ ವಿಮಾನ ಕಾರ್ಯಾಚರಣೆ ತಡವಾಗಬಹುದು. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ಪ್ರಯಣಿಕರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಮತ್ತು ಟ್ರಾಫಿಕ್ ಇರುವುದರಿಂದ ಸ್ವಲ್ಪ ಮುಂಚಿತವಾಗಿಯೇ ಹೊರಡಿ. ವಿಮಾನ ಕಾರ್ಯಚರಣೆ ತಡವಾದರೆ ಪ್ರಯಾಣಿಕರು ಸಹಕರಿಸಬೇಕು ಎಂದು ವಿಮಾನಯಾನ ಸಂಸ್ಥೆಗಳಾದ ಇಂಡಿಗೊ, ಏರ್ ಇಂಡಿಯಾ, ಸ್ಪೇಸ್‌ಜೆಟ್ ಮತ್ತು ಅಕಾಸಾ ಮನವಿ ಮಾಡಿವೆ.

ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಗಳಲ್ಲಿ, ಮುಂಬೈ ನಗರದಲ್ಲಿ ಸರಾಸರಿ 10.5 ಸೆ.ಮೀ. ಮಳೆಯಾಗಿದೆ. ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ ಕ್ರಮವಾಗಿ 16.1 ಮತ್ತು 15.9 ಸೆ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಮುಂಬೈನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲೇ ಉಳಿಯುವಂತೆ ಸರ್ಕಾರ ಮನವಿ ಮಾಡಿದೆ.

[t4b-ticker]
error: Content is protected !!