ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲೆಂದೇ ವಿಧಾನಪರಿಷತ್ ಚುನಾವಣೆಯಲ್ಲಿ ಕೆಲ ಬಿಜೆಪಿ ಶಾಸಕರು ಅಡ್ಡಮತದಾನ ಮಾಡಿ ವಿಜಯೇಂದ್ರ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದರ ಮಧ್ಯೆ ಇದೀಗ ಮಾಜಿ ಸಿಎಂ ಡಿವಿ ಸದಾನಂದಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಆಡಿಯೋದಲ್ಲಿ ಏನೇನಿದೆ?
“ನಾನು ಹೇಳುತ್ತಿರುವುದು ಸರಿಯೋ ತಪ್ಪೋ ನೀವೇ ಹೇಳಿ. ವಿಜಯೇಂದ್ರ ಅವರು 3 ವರ್ಷಗಳ ಅಧ್ಯಕ್ಷ ಅವಧಿಯನ್ನು ಮುಗಿಸುತ್ತಿದ್ದಾರೆ.” “ನವೆಂಬರ್‌ನಲ್ಲಿ ಅವರ ಅಧ್ಯಕ್ಷ ಅವಧಿ ಮುಗಿಯುತ್ತದೆ. ಇನ್ನು 2-3 ತಿಂಗಳಿಗೆ ಏಕೆ ಗೊಂದಲ ಸೃಷ್ಟಿಸಬೇಕು?…”ಈ ಸಮಯದಲ್ಲಿ ವಿಜಯೇಂದ್ರ ಅವರ ಟೀಮ್‌ನಲ್ಲಿ ಗೊಂದಲ ಸೃಷ್ಟಿಸಬೇಕು. 2 ತಿಂಗಳು ಸ್ಕೂತ್ ಆಗಿ ಮುಂದುವರಿಸಿ, ಬಳಿಕ ಹೊರಗೆ ಕಳಿಸಿ.” “ಅವಧಿ ಮುಗಿದ ನಂತರ ಅವರನ್ನು ಕೆಳಗಿಳಿಸಿದರೆ ಯಾರೂ ದೂಷಿಸುವುದಿಲ್ಲ. ಪಕ್ಷದೊಳಗೆ ಗೊಂದಲವಾಗುವುದಿಲ್ಲ!” “ಜುಲೈ, ಆಗಸ್ಟ್, ಸೆಪ್ಟೆಂಬರ್ ವರೆಗೂ ಇರಲಿ. ಅಕ್ಟೋಬರ್‌ನಲ್ಲಿ ಅವರನ್ನು ‘ಕಿಕ್ ಔಟ್ ಮಾಡಿ” “ಈಗಲೇ ಹೊರಗೆ ಕಳಿಸಿದರೆ ಅವರ ಪರವಾದ ಟೀಮ್ ನಿಮ್ಮ ನಿರ್ಧಾರವನ್ನು ಪ್ರಶ್ನಿಸುತ್ತದೆ. ಇನ್ನೂ 2 ತಿಂಗಳು ತಳ್ಳುವುದೇ ಉತ್ತಮ ಆಯ್ಕೆ” ಎಂದು ಆಡಿಯೋದಲ್ಲಿ ತಿಳಿಸಲಾಗಿದೆ.ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅವರು ಇನ್ನೂ 3 ತಿಂಗಳಲ್ಲಿ 3 ವರ್ಷ ಪೂರೈಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಅವಧಿ 3 ವರ್ಷ ಇರುವುದು ಹಿಂದಿನಿಂದಲೂ ನಡೆದುಕೊಂಡು ಬಂದ ನಿಯಮವಾಗಿದೆ. ಈ ಹೊತ್ತಿನಲ್ಲೇ ಸ್ಫೋಟಕ ಆಡಿಯೋ ಹೊರಬಂದಿದೆ.
ಡಿವಿಎಸ್ ಹೇಳಿದ್ದೇನು?
ಇನ್ನು ಈ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಮಾತನಾಡಿರುವ ನೀಡಿರುವ ಡಿವಿಎಸ್, ಆಡಿಯೋ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ, ಹಾಗಾಗಿ ಉತ್ತರ ಕೊಡುವುದಿಲ್ಲ.ಆಡಿಯೋ ಬಗ್ಗೆ ಸತ್ಯ ಸಂಗತಿ ಹೊರಬರಲಿ. ನನ್ನ ಬಗ್ಗೆ ಬಹಳ ದಿನದಿಂದ ಚರ್ಚೆ ಆಗುತ್ತಿತ್ತು.ಕೋರ್ ಕಮಿಟಿ ಸಭೆಯಲ್ಲಿ ಕೆಲವು ಮಾತುಗಳನ್ನು ಹೇಳಿದ್ದೇನೆ. ಕೇಂದ್ರ ನಾಯಕರು, ರಾಜ್ಯ ನಾಯಕರು ಕೇಳಿದ್ರೆ ಉತ್ತರ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.











































