ನವದೆಹಲಿ: ದಿನನಿತ್ಯ 1.5 ಜಿ.ಬಿ ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯ ನೀಡುವ ಎಲ್ಲ ಪ್ರಿಪೇಯ್ಡ್ ಯೋಜನೆಗಳನ್ನು ಭಾರ್ತಿ ಏರ್‌ಟೆಲ್ ಕಂಪನಿಯು ಸ್ಥಗಿತಗೊಳಿಸಿದೆ.
*₹299, ₹319, ₹579, ₹619 ಮತ್ತು ₹649 ಈ ಐದು ರದ್ದಾದ ಪ್ರಿಪೇಯ್ಡ್ ಯೋಜನೆಗಳಾಗಿವೆ. ಕಂಪನಿಯ ಆರಂಭಿಕ ಹಂತದ ಯೋಜನೆಗಳಾದ ₹199 ಮತ್ತು ₹219ರ ಬೆಲೆ ಮಾತ್ರ ಯಥಾಸ್ಥಿತಿಯಲ್ಲಿವೆ ಎಂದು ಕಂಪನಿಯ ಆ್ಯಪ್‌ನಲ್ಲಿನ ಮಾಹಿತಿ ತಿಳಿಸಿದೆ.ಅತಿಹೆಚ್ಚು ಜನಪ್ರಿಯವಾದ ₹299 ಮೌಲ್ಯದ ಯೋಜನೆಯ ಬೆಲೆ ಈಗ ₹349 ಆಗಿದ್ದು, ಅನಿಯಮಿತ 5ಜಿ ಸೇವೆ ನೀಡಲಿದೆ. ಈ ಯೋಜನೆ ಬೆಲೆಯಲ್ಲಿ ಶೇ 16ರಷ್ಟು ಏರಿಕೆ ಆಗಿದೆ.ಪ್ರತಿ ಗ್ರಾಹಕರಿಂದ ಬರುವ ವರಮಾನದಲ್ಲಿ (ಎಆರ್‌ಪಿಯು) ಹೆಚ್ಚಳ ಮಾಡುವ ಉದ್ದೇಶವನ್ನು ಕಂಪನಿ ಹೊಂದಿದೆ. ಹೀಗಾಗಿ ದರ ಏರಿಕೆ ಆಗಿದೆ. ಕಳೆದ ವರ್ಷದ ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ಎಆರ್‌ಪಿಯು ₹250 ಇತ್ತು. ಅದು ಈಗ ₹264ಕ್ಕೆ ಹೆಚ್ಚಳವಾಗಿದ್ದು, ಶೇ 5.6ರಷ್ಟು ಏರಿಕೆಯಾಗಿದೆ.
ಅತಿ ಕಡಿಮೆ ದರದಲ್ಲಿ ಅನಿಯಮಿತ ಡೇಟಾ ನೀಡಲಾಗುತ್ತಿದೆ. ಕಂಪನಿಯ ಬೆಳವಣಿಗೆಗಾಗಿ ದರವನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಕಳೆದ ವಾರ ತ್ರೈಮಾಸಿಕದ ಫಲಿತಾಂಶ ಪ್ರಕಟಿಸುವ ವೇಳೆ ಕಂಪನಿ ಹೇಳಿತ್ತು.ಈ ದರ ಏರಿಕೆಯಿಂದ ಇತರೆ ದೂರಸಂಪರ್ಕ ಸೇವೆ ನೀಡುವ ಕಂಪನಿಗಳು ಸಹ ಇದೇ ರೀತಿ ಬೆಲೆ ಹೆಚ್ಚಳದ ಮಾರ್ಗ ಅನುಸರಿಸಬಹುದು ಎಂದು ವಲಯದ ತಜ್ಞರು ಹೇಳಿದ್ದಾರೆ.











































