ಮುಂಬೈ: ಇತ್ತೀಚೆಗೆ ನಟ ಯಶ್ ‘ಇಂಡಿಯಾ ಟಿವಿ’ಯ ಸಂಪಾದಕ ರಜತ್ ಶರ್ಮಾ ಅವರ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರ ಕನ್ನಡ ಭಾಷಾಭಿಮಾನಕ್ಕೆ ನೆಟ್ಟಿಗರು ಮನಸೋತಿದ್ದಾರೆ.
ಕಾರ್ಯಕ್ರಮದಲ್ಲಿ ತಮ್ಮ ಸಿನಿ ಪಯಣ ಮತ್ತು ಮುಂಬರುವ ‘ಟಾಕ್ಸಿಕ್’ ಚಿತ್ರದ ಕುರಿತು ಯಶ್ ಮಾತನಾಡಿದ್ದಾರೆ.ಕಾರ್ಯಕ್ರಮದಲ್ಲಿ ನಿರೂಪಕ ರಜತ್ ಶರ್ಮಾ ಅವರು ಕರ್ನಾಟಕದ ಭಾಷೆಯನ್ನು ‘ಕನ್ನಡ’ ಎನ್ನುವ ಬದಲು ‘ಕನ್ನಡ್’ ಎಂದು ಉಚ್ಚರಿಸಿದರು. ತಕ್ಷಣವೇ ಯಶ್ ಅವರು, ‘ಸರ್, ಸಣ್ಣದೊಂದು ವಿನಂತಿ… ಅದು ಕನ್ನಡ್ ಅಲ್ಲ, ‘ಕನ್ನಡ’ ಎಂದು ಪ್ರೀತಿಯಿಂದಲೇ ತಿದ್ದುಪಡಿ ಮಾಡಿದರು. ಯಶ್ ಅವರ ಈ ವಿನಂತಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಬೆಂಬಲಿಸಿದರು.
ರಜತ್ ಶರ್ಮಾ ಕೂಡ ತಕ್ಷಣವೇ ತಮ್ಮ ಉಚ್ಚಾರಣೆಯನ್ನು ತಿದ್ದಿಕೊಂಡು, ನಗೆಮೊಗದಿಂದಲೇ ‘ಕನ್ನಡ’ ಎಂದು ಸರಿಯಾಗಿ ಉಚ್ಚರಿಸಿದರು.
ನೆಲ ಮತ್ತು ಭಾಷೆಯ ಮೇಲಿನ ಯಶ್ ಅವರ ಗೌರವ ಹಾಗೂ ರಜತ್ ಶರ್ಮಾ ಅವರ ಸೌಜನ್ಯದ ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ‘ಯಾವುದೇ ಕೋಪ ಅಥವಾ ಹಠವಿಲ್ಲದೆ ತಮ್ಮ ಸಂಸ್ಕೃತಿಯನ್ನು ಹೇಗೆ ಎತ್ತಿಹಿಡಿಯಬೇಕು ಎಂಬುದಕ್ಕೆ ಇದು ಮಾದರಿ’ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.ಗೀತು ಮೋಹನ್‌ದಾಸ್ ನಿರ್ದೇಶನದ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.













































