ಎಲ್ ನಿನೋ ಪ್ರಭಾವ: 11 ವರ್ಷಗಳಲ್ಲೇ ಅತಿ ಕಡಿಮೆ ಮಳೆ: ದೇಶಾದ್ಯಂತ ಶೇ.13, ಕರ್ನಾಟಕದಲ್ಲಿಶೇ.30ರಷ್ಟು ಮಳೆ ಕೊರತೆ

Picture of Savistara

Savistara

Bureau Report

ಹೊಸದಿಲ್ಲಿ: ಭಾರತದ ನೈರುತ್ಯ ಮುಂಗಾರು ಋತು ಬುಧವಾರ ಅಂತ್ಯಗೊಂಡಿದ್ದು, ಈ ಬಾರಿ ದೇಶಾದ್ಯಂತ ಒಟ್ಟಾರೆಯಾಗಿ ಶೇ.13ರಷ್ಟು ಮಳೆ ಕೊರತೆ ದಾಖಲಾಗಿದೆ. ಕಳೆದ 11 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆಯಾದ ಮುಂಗಾರು ಇದಾಗಿದ್ದು, ದಕ್ಷಿಣ, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮಳೆ ಕೊರತೆಯ ಪ್ರಮಾಣ ಹೆಚ್ಚಾಗಿದೆ.ಕರ್ನಾಟಕದಲ್ಲೂ ಶೇ.30ರಷ್ಟು ಮಳೆ ಕೊರತೆ ದಾಖಲಾಗಿದ್ದು, ಹಲವು ಪ್ರದೇಶಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾವ ಭಾಗದಲ್ಲಿ ಎಷ್ಟು ಮಳೆ ಕೊರತೆ?ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ.25ಕ್ಕೂ ಅಧಿಕ ಮಳೆ ಕೊರತೆ ದಾಖಲಾಗಿದ್ದರೆ, ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ಶೇ.24ಕ್ಕೂ ಅಧಿಕ ಕೊರತೆ ಉಂಟಾಗಿದೆ.

ದೇಶಾದ್ಯಂತ ಈ ಮುಂಗಾರು ಅವಧಿಯಲ್ಲಿ ಒಟ್ಟು 759.4 ಮಿ.ಮೀ. ಮಳೆಯಾಗಿದೆ. 2001ರ ಬಳಿಕ ಇದು ನಾಲ್ಕನೇ ಅತಿ ಕಡಿಮೆ ಮುಂಗಾರು ಮಳೆಯಾಗಿದ್ದು, 1901ರಿಂದ ಲೆಕ್ಕ ಹಾಕಿದರೆ 13ನೇ ಅತಿ ಕಡಿಮೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್‌ನಿನೋ ಪ್ರಭಾವದೇಶಾದ್ಯಂತ ಮಳೆ ಕೊರತೆಗೆ ಎಲ್‌ನೋ ಪರಿಣಾಮವೂ ಪ್ರಮುಖ ಕಾರಣವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎಲ್‌ನೋ ಪರಿಸ್ಥಿತಿಯಿಂದ ಮುಂಗಾರು ಮಳೆಯ ಮೇಲೆ ಪರಿಣಾಮ ಬೀರಿದ್ದು, ಹಲವು ರಾಜ್ಯಗಳಲ್ಲಿ ಮಳೆ ಅಭಾವ ಉಂಟಾಗಿದೆ.

ಕರ್ನಾಟಕದಲ್ಲಿ ಶೇ.30ರಷ್ಟು ಮಳೆ ಕೊರತೆ

ಕರ್ನಾಟಕದಲ್ಲಿ ಎಲ್‌ನಿನೋ ಪರಿಣಾಮ ತೀವ್ರವಾಗಿ ಕಂಡುಬಂದಿದ್ದು, ರಾಜ್ಯದಲ್ಲಿ ಶೇ.30ರಷ್ಟು ಮಳೆ ಕೊರತೆ ದಾಖಲಾಗಿದೆ. ಈಗಾಗಲೇ ರಾಜ್ಯದ 100ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.ದಕ್ಷಿಣ ಭಾರತದ ಇತರ ರಾಜ್ಯಗಳ ಪೈಕಿ ಕೇರಳದಲ್ಲಿ ಶೇ.28, ಆಂಧ್ರಪ್ರದೇಶದಲ್ಲಿ ಶೇ.25, ತಮಿಳುನಾಡಿನಲ್ಲಿ ಶೇ.20 ಹಾಗೂ ತೆಲಂಗಾಣದಲ್ಲಿ ಶೇ.18ರಷ್ಟು ಮಳೆ ಕೊರತೆ ದಾಖಲಾಗಿದೆ.

ಇತರ ರಾಜ್ಯಗಳಲ್ಲೂ ಮಳೆ ಅಭಾವ

ಮಣಿಪುರದಲ್ಲಿ ಶೇ.46ರಷ್ಟು ಮಳೆ ಕೊರತೆ ದಾಖಲಾಗಿದ್ದು, ಮಳೆ ಅಭಾವ ಎದುರಿಸುತ್ತಿರುವ ರಾಜ್ಯಗಳ ಪೈಕಿ ಇದು ಅತ್ಯಧಿಕವಾಗಿದೆ. ಅರುಣಾಚಲ ಪ್ರದೇಶದಲ್ಲಿ ಶೇ.44, ಪಂಜಾಬ್‌ನಲ್ಲಿ ಶೇ.41, ಬಿಹಾರದಲ್ಲಿ ಶೇ.32, ಅಸ್ಸಾಂನಲ್ಲಿ ಶೇ.28 ಹಾಗೂ ಹರಿಯಾಣದಲ್ಲಿ ಶೇ.23ರಷ್ಟು ಕೊರತೆ ದಾಖಲಾಗಿದೆ.

ದಶಕದಲ್ಲೇ ಒಣಹವೆಯ ಮುಂಗಾರು

ಎಲ್‌ನೋ ಪರಿಣಾಮದಿಂದಾಗಿ ಈ ಬಾರಿ ದೇಶದಲ್ಲಿ ದಶಕದಲ್ಲೇ ಅತ್ಯಂತ ಒಣಹವೆಯ ಮುಂಗಾರು ದಾಖಲಾಗಿದೆ. 2015ರಲ್ಲಿ ಕೊನೆಯ ಬಾರಿಗೆ ಇದೇ ರೀತಿಯ ಮಳೆ ಕೊರತೆ ಕಂಡುಬಂದಿದ್ದು. ಆ ವರ್ಷವೂ ದೇಶಾದ್ಯಂತ ಸುಮಾರು ಶೇ.13ರಷ್ಟು ಮಳೆ ಕೊರತೆ ದಾಖಲಾಗಿತ್ತು.

ಜೂನ್‌ನಲ್ಲಿ ತೀವ್ರ ಮಳೆ ಕೊರತೆ

ಮುಂಗಾರು ಆರಂಭದ ಜೂನ್ ತಿಂಗಳಲ್ಲೇ ಮಳೆ ಕೊರತೆ ತೀವ್ರವಾಗಿತ್ತು. ಆ ತಿಂಗಳಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಸುಮಾರು ಶೇ.65ರಷ್ಟು ಮಾತ್ರ ಮಳೆಯಾಗಿತ್ತು. ಜುಲೈನಲ್ಲಿ ಮಳೆಯ ಪ್ರಮಾಣದಲ್ಲಿ ಕೊಂಚ ಚೇತರಿಕೆ ಕಂಡುಬಂದರೂ, ಆಗಸ್ಟ್‌ನಲ್ಲಿ ಮತ್ತೆ ಕೊರತೆ ಉಂಟಾಯಿತು. ಸೆಪ್ಟೆಂಬರ್‌ನಲ್ಲಿ ಮಳೆ ಪ್ರಮಾಣದಲ್ಲಿ ತುಸು ಸುಧಾರಣೆ ಕಂಡುಬಂದಿದೆ.

[t4b-ticker]
error: Content is protected !!