ಬೆಂಗಳೂರು: ‘ಗೃಹಲಕ್ಷ್ಮಿ’ ಯೋಜನೆಯಡಿ ಮಹಿಳೆಯರ ಖಾತೆಗೆಪ್ರತಿ ತಿಂಗಳು ಜಮೆಯಾಗುವ ₹ 2 ಸಾವಿರವನ್ನು ಯಾವುದೇ ಕಾರಣಕ್ಕೂ ಸಾಲದ ಕಂತು ಅಥವಾ ಬಡ್ಡಿಗೆ ಕಡಿತ ಮಾಡದಂತೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ದೇಶನ ನೀಡಿದ್ದಾರೆ.
‘ಗೃಹಲಕ್ಷ್ಮಿ’ ಹಣವನ್ನು ಸಾಲದ ಕಂತಿಗೆ ಕಡಿತ ಮಾಡದಂತೆ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.ಈ ಮನವಿಗೆ ತಕ್ಷಣ ಸ್ಪಂದಿಸಿರುವ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ತಿಳಿಸಿದ್ದಾರೆ.ಗೃಹಲಕ್ಷ್ಮಿ ಹಣ ಕಡಿತದಿಂದ ಬಡ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದಕ್ಕೆ ಕೈಗೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮಗಳ ಕುರಿತು ಮುಖ್ಯಮಂತ್ರಿಗೆ ಗೂಳಿಗೌಡ ಮಾಹಿತಿ ನೀಡಿದ್ದರು.
‘ಗೃಹ ಲಕ್ಷ್ಮಿಹಣ ಮಕ್ಕಳ ಶಿಕ್ಷಣ ಹಾಗೂ ಮಹಿಳೆಯರ ಸ್ವಾವಲಂಬನೆಗೆ ದೊಡ್ಡ ಆಸರೆಯಾಗಿದೆ. ಆದರೆ, ವಾಣಿಜ್ಯ ಬ್ಯಾಂಕ್‌ಗಳು, ಖಾಸಗಿ ಫೈನಾನ್ಸ್ ಕಂಪನಿಗಳು ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಣ ಜಮೆಯಾದ ತಕ್ಷಣ ಹಳೆಯ ಸಾಲದ ಬಾಕಿ ಅಥವಾ ಬಡ್ಡಿಯ ನೆಪವೊಡ್ಡಿ ಕಡಿತಗೊಳಿಸುತ್ತಿವೆ.ಫಲಾನುಭವಿಗಳ ಗಮನಕ್ಕೂ ತರದೆ ಕಡಿತ ಮಾಡಿಕೊಳ್ಳುತ್ತಿರುವುದರಿಂದ ಯೋಜನೆಯ ಮೂಲ ಆಶಯಕ್ಕೇ ಧಕ್ಕೆ ಉಂಟಾಗುತ್ತಿದೆ’ ಎಂದು ಪತ್ರದಲ್ಲಿ ಅವರು ಹೇಳಿದ್ದರು.ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್‌ಗಳ ಪರಿಶೀಲನಾ ಸಮಿತಿ ಸಭೆಯಲ್ಲಿಯೂ ಜಿಲ್ಲಾಡಳಿತಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಗೃಹಲಕ್ಷ್ಮಿ ಹಣವನ್ನು ಸಾಲದ ಕಂತು ಅಥವಾ ಬಡ್ಡಿಗೆ ಮುಟ್ಟುಗೋಲು ಹಾಕಿಕೊಳ್ಳಬಾರದು ಎಂದು ಸ್ಪಷ್ಟಪಡಿಸಿವೆ. ಫಲಾನುಭವಿಗಳ ಖಾತೆಗೆ ಹಣ ಬರುತ್ತಿದ್ದಂತೆ ಬಲವಂತವಾಗಿ ವಸೂಲಿ ಮಾಡುವ ಅಥವಾ ಬೆದರಿಕೆ ಒಡ್ಡುವ ಖಾಸಗಿ ಫೈನಾನ್ಸ್ ಕಂಪನಿಗಳು ಮತ್ತು ಏಜೆಂಟರ ವಿರುದ್ಧ ಸುಲಿಗೆ ಪ್ರಕರಣ ದಾಖಲಿಸಿ, ಅವರ ಪರವಾನಗಿ ರದ್ದುಪಡಿಸುವಂತಹ ಕಠಿಣ ಎಚ್ಚರಿಕೆ ನೀಡಬೇಕು. ಮಹಿಳೆಯರ ಲಿಖಿತ ಒಪ್ಪಿಗೆ ಇಲ್ಲದೆ ಈಗಾಗಲೇ ಸಾಲದ ಬಾಕಿಗೆ ಕಡಿತಗೊಳಿಸಲಾಗಿರುವ ಹಣವನ್ನು ತಕ್ಷಣವೇ ಆಯಾ ಮಹಿಳೆಯರ ಖಾತೆಗೆ ಮರು ಜಮೆ ಮಾಡಿಸಲು ಬ್ಯಾಂಕ್‌ಗಳಿಗೆ ತಾಕೀತು ಮಾಡುವಂತೆ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದೂ ಪತ್ರದಲ್ಲಿ ಆಗ್ರಹಿಸಿದ್ದರು.
















































