ಲಖನೌ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹದ ಹಿರಿಯ ಅಧಿಕಾರಿ ಧನರಾಜ್ ಪರಿಮಳ್ ನಥಾನಿ ಅವರನ್ನು ತಮ್ಮ ಪಕ್ಷದಿಂದ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯನ್ನಾಗಿಸುವ ಮೂಲಕ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.
ನಥಾನಿ ಮತ್ತು ಸಮಾಜವಾದಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರು ಅಖಿಲೇಶ್ ಹಾಗೂ ಪಕ್ಷದ ಇತರ ನಾಯಕರ ಸಮ್ಮುಖದಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದರು.ನಥಾನಿ ಅವರನ್ನು ಕಣಕ್ಕಿಳಿಸಿರುವುದು ಬಿಜೆಪಿ ಮಾತ್ರವಲ್ಲದೇ ಸಮಾಜವಾದಿ ಪಕ್ಷದ ನಾಯಕರಲ್ಲೂ ಅಚ್ಚರಿ ಮೂಡಿಸಿದೆ.ಗುಜರಾತ್‌ನ ನಥಾನಿ ಅವರು, ಲಂಡನ್‌ನಲ್ಲಿ ರೆಜೆಂಟ್ ಬ್ಯೂಸಿನೆಸ್ ಸ್ಕೂಲ್‌ನಲ್ಲಿ ಅಂತರರಾಷ್ಟ್ರೀಯ ವ್ಯವಹಾರ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಸದ್ಯ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ನಥಾನಿ ಅವರ ತಂದೆ ಕೂಡ ರಿಲಯನ್ಸ್ ಸಮೂಹದ ಹಿರಿಯ ಅಧಿಕಾರಿಯಾಗಿದ್ದು, ಜಾರ್ಖಂಡ್‌ನಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಬೆಂಬಲಿತ ರಾಜ್ಯಸಭಾ ಸದಸ್ಯರಾಗಿದ್ದಾರೆ.ವಿಧಾಸಭೆಯಲ್ಲಿನ ಬಲಾಬಲಗಳ ಪ್ರಕಾರ ಪ್ರತಿ ಅಭ್ಯರ್ಥಿಯ ಗೆಲುವಿಗೆ 37 ಮತಗಳು ಬೇಕಾಗುತ್ತವೆ. ಹಾಗಾಗಿ ಬಿಜೆಪಿಯಿಂದ ಏಳು ಅಭ್ಯರ್ಥಿಗಳು ಮತ್ತು ಸಮಾಜವಾದಿ ಪಕ್ಷದಿಂದ ಇಬ್ಬರು ಸುಲಭವಾಗಿ ರಾಜ್ಯಸಭೆಗೆ ಪ್ರವೇಶಿಸಬಹುದು.
















































