ಬಾನು ಕಪ್ಪಾಗಿ ಒಂದು ಹನಿ ಮಳೆ ಬಿದ್ದರೆ ಸಾಕು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಘೋರ ಪರಿಸ್ಥಿತಿ ಎದುರಾಗಿದೆ. ಇಂದು ಸಂಜೆ ಸುಳ್ಯ ಹಾಗೂ ಸುತ್ತಮುತ್ತಲಿನ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದಂತೆ ಇಡೀ ನಗರವೇ ಕತ್ತಲಲ್ಲಿ ಮುಳುಗಿದೆ.
ಗಂಟೆಗಟ್ಟಲೆ ಕಾಯ್ದು ಕೊನೆಗೆ ವಿದ್ಯುತ್ ಬಂದರೂ, ಬಲ್ಬ್ ಉರಿಯಲು ಅಗತ್ಯವಿರುವ ಕನಿಷ್ಠ ವೋಲ್ಟೇಜ್ (Low Voltage) ಇಲ್ಲದೆ ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ.ಸುಳ್ಯದ ಹಳೆಗೇಟು, ಜಯನಗರ, ಕುದ್ದಾಜೆ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ಸಂಜೆ 5 ಗಂಟೆಗೆ ಕಡಿತಗೊಂಡ ವಿದ್ಯುತ್ ಸಂಪರ್ಕವು ರಾತ್ರಿ 10:30 ಕಳೆದರೂ ಮರುಸ್ಥಾಪನೆಯಾಗಿರಲಿಲ್ಲ. ಗ್ರಾಮೀಣ ಭಾಗಗಳಲ್ಲಂತೂ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಇಡೀ ರಾತ್ರಿ ವಿದ್ಯುತ್ ಇಲ್ಲದೆ ಸಾರ್ವಜನಿಕರು ಕತ್ತಲಲ್ಲಿ ಕಳೆಯುವಂತಾಗಿದೆ.
ಅಷ್ಟೇ ಅಲ್ಲದೆ, ಪದೇ ಪದೇ ಹರಿದುಹೋಗುವ ವಿದ್ಯುತ್ ಹಾಗೂ ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆಯಲ್ಲಿ ನಡೆಯುತ್ತಿರುವ ಅಘೋಷಿತ ‘ಲೋಡ್ ಶೆಡ್ಡಿಂಗ್’ನಿಂದಾಗಿ ವಿದ್ಯಾರ್ಥಿಗಳು ಹಾಗೂ ವಯೋವೃದ್ಧರು ಹೈರಾಣಾಗಿದ್ದಾರೆ.ಯಾವ ಸರ್ಕಾರ ಬಂದರೂ, ಯಾರು ಅಧಿಕಾರ ನಡೆಸಿದರೂ ಸುಳ್ಯದ ಜನರ ವಿದ್ಯುತ್ ಬವಣೆ ಹಾಗೂ ಮೆಸ್ಕಾಂ (MESCOM) ಸಿಬ್ಬಂದಿಯ ಜಡತ್ವಕ್ಕೆ ಮುಕ್ತಿ ಸಿಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಸಣ್ಣ ಮಳೆಗೂ ಇಡೀ ತಾಲೂಕಿನ ನೆಟ್‌ವರ್ಕ್ ಧರಾಶಾಹಿಯಾಗುವ ತಾಂತ್ರಿಕ ಲೋಪವನ್ನು ಶಾಶ್ವತವಾಗಿ ಸರಿಪಡಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.














































