ನಿಶಿನ್: ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ದ ಎದುರಾಳಿ ಪಾಕಿಸ್ತಾನ ವಿರುದ್ಧ 19 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಭಾರತ ತಂಡ ಚಿನ್ನದ ಪದಕ ಗೆದ್ದಿದೆ.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಅಭಿಷೇಕ್ ಶರ್ಮಾ (61) ಹಾಗೂ ತಿಲಕ್ ವರ್ಮಾ (51*) ಬಾರಿಸಿದ ಬಿರುಸಿನ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 211 ರನ್‌ಗಳ ಬೃಹತ್ ಮೊತ್ತ ಪೇರಿಸಿತು.ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರು ವಿಕೆಟ್ ನಷ್ಟಕ್ಕೆ 192 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇದರೊಂದಿಗೆ ಸತತ ಎರಡು ಬಾರಿಯ ವಿಶ್ವ ಚಾಂಪಿಯನ್ ಭಾರತ, ಏಷ್ಯನ್ ಗೇಮ್ಸ್‌ನಲ್ಲೂ ಕೀರ್ತಿ ಪತಾಕೆಯನ್ನು ಹಾರಿಸಿದೆ.ಪಾಕಿಸ್ತಾನದ ಪರ ಹಸನ್ ನವಾಜ್ ದಿಟ್ಟ ಹೋರಾಟವು ವ್ಯರ್ಥವೆನಿಸಿತು. ನವಾಜ್ 51 ಎಸೆತಗಳಲ್ಲಿ ಏಳು ಸಿಕ್ಸರ್ ಹಾಗೂ ಐದು ಬೌಂಡರಿಗಳಿಂದ 96 ರನ್ ಗಳಿಸಿ ಶತಕ ವಂಚಿತರಾದರು.
ಭಾರತದ ಪರ ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಗಳಿಸಿದರು.
ಅಭಿಷೇಕ್, ತಿಲಕ್ ಬಿರುಸಿನ ಅರ್ಧಶತಕ
ಭಾರತದ ಪರ ಅಭಿಷೇಕ್ 20 ಹಾಗೂ ತಿಲಕ್ 21 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಗೆಲುವಿನ ರೂವಾರಿಯೆನಿಸಿದರು.ಈ ಮೊದಲು ಅಭಿಷೇಕ್ ಹಾಗೂ ವೈಭವ್ ಸೂರ್ಯವಂಶಿ ಬಿರುಸಿನ ಆರಂಭವೊದಗಿಸಿದರು. ಆದರೆ ವೈಭವ್ (15) ಹೆಚ್ಚು ಹೊತ್ತು ನಿಲ್ಲಲಿಲ್ಲ.ಸಂಜು ಸ್ಯಾಟ್ಸನ್ (2) ವೈಫಲ್ಯ ಅನುಭವಿಸಿದರು. ನಾಯಕ ಶ್ರೇಯಸ್ ಅಯ್ಯರ್ (21) ಹಾಗೂ ಇಶಾನ್ ಕಿಶನ್ (20) ಉಪಯುಕ್ತ ಕಾಣಿಕೆ ನೀಡಿದರು.ಅತ್ತ ಬಿರುಸಿನ ಆಟವಾಡಿದ ಅಭಿಷೇಕ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅಂತಿಮವಾಗಿ 28 ಎಸೆತಗಳಲ್ಲಿ ಏಳು ಸಿಕ್ಸರ್ ಹಾಗೂ ಮೂರು ಬೌಂಡರಿಗಳಿಂದ 61 ರನ್ ಗಳಿಸಿದರು.ಕೊನೆಯ ಹಂತದಲ್ಲಿ ಬೀಸಾಟವಾಡಿದ ತಿಲಕ್ ವರ್ಮಾ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅವರಿಗೆ ಶಿವಂ ದುಬೆ (27) ಉತ್ತಮ ನೆರವು ನೀಡಿದರು. ತಿಲಕ್ 22 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿಗಳಿಂದ 51 ರನ್ ಗಳಿಸಿ ಔಟಾಗದೆ ಉಳಿದರು.









































