ಹವಾಮಾನ ವಿಮೆ ಹೆಸರಿಗಷ್ಟೇನಾ? 2025ರಲ್ಲಿ ಅತಿ ಹೆಚ್ಚು ಮಳೆ ಬಂದರೂ ಅಡಿಕೆ ಬೆಳೆಗಾರರಿಗೆ ಕಡಿಮೆ ಪರಿಹಾರ – ರೈತರಲ್ಲಿ ಆಕ್ರೋಶ!

Picture of Savistara

Savistara

Bureau Report

ಕರಾವಳಿ ಜಿಲ್ಲೆಗಳಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ ಅವ್ಯವಹಾರದ ವಾಸನೆ? ಕರಾವಳಿ ಜಿಲ್ಲೆಗಳಲ್ಲಿ ಕಳೆದ ವರ್ಷವೇ ಹವಾಮಾನ ಆಧಾರಿತ ಬೆಳೆ ವಿಮಾ ಮೊತ್ತ ಕಡಿಮೆ ಬಂದಿತ್ತು. ಮಳೆ ಮಾಹಿತಿ ಸರಿಯಾಗಿ ದಾಖಲಾಗಿಲ್ಲ, ಪಂಚಾಯತ್ ಮಟ್ಟದ ಮಳೆ ಮಾಪಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೃಷಿಕರು, ರಾಜಕೀಯ ಮುಖಂಡರು, ಸಹಕಾರಿ ಸಂಘಗಳ ಪ್ರಮುಖರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಮಳೆ ಲೆಕ್ಕಾಚಾರವನ್ನು ಪುನರ್ ಪರಿಶೀಲಿಸಬೇಕು ಎಂಬ ಮಾತೂ ಕೇಳಿ ಬಂದಿತ್ತು.ಆದರೆ 2025 ಅತಿ ಹೆಚ್ಚು ಮಳೆ ಬಂದ ವರ್ಷವಾದರೂ, ಇಂದು ರೈತರ ಅಕೌಂಟ್‌ಗೆ ಜಮಾ ಆಗುತ್ತಿರುವ ಹವಾಮಾನ ಆಧಾರಿತ ಬೆಳೆ ವಿಮಾ ಮೊತ್ತ ಕಳೆದ ವರ್ಷಕ್ಕಿಂತಲೂ ಕಡಿಮೆ ಬಂದಿದೆ!

ಇಲ್ಲಿ ಎದ್ದಿರುವ ಪ್ರಶ್ನೆ: ಹವಾಮಾನ ಆಧಾರಿತ ವಿಮೆಗೆ ಮಳೆ-ಬಿಸಿಲಿನ ನಿಜವಾದ ಮಾಹಿತಿಯನ್ನು ಸಂಗ್ರಹಿಸುತ್ತಾರಾ? ಅಥವಾ ಸರ್ಕಾರದಿಂದ ಕಂಪನಿಗೆ ಬಿಡುಗಡೆಯಾಗುವ ಹಣವೇ ಕಡಿಮೆಯಾ?

ಅಡಿಕೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ (2026-27ನೇ ಸಾಲು) ಪ್ರತಿ ಹೆಕ್ಟೇರ್‌ಗೆ ರೂ. 1,28,000 ವಿಮಾ ಮೊತ್ತ ನಿಗದಿಪಡಿಸಲಾಗಿದೆ. ಈಗ ಹೆಕ್ಟೇರ್‌ಗೆ ಕೇವಲ 30,000 ಪರಿಹಾರ ಕೊಟ್ಟರೆ, ಉಳಿದ ಹಣ ಕಂಪನಿ ಬಳಿ ಉಳಿಯುತ್ತದೆಯೇ? ಎಂಬ ಅನುಮಾನ ರೈತರಿಂದ ವ್ಯಕ್ತವಾಗುತ್ತಿದೆ.ಈ ಯೋಜನೆಯಲ್ಲಿ ರೈತರು ಕೇವಲ ಶೇ. 2 ರಿಂದ 5 ರಷ್ಟು ಪ್ರೀಮಿಯಂ ಮಾತ್ರ ಕಟ್ಟುತ್ತಾರೆ. ಉಳಿದ ದೊಡ್ಡ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತವೆ.

ದಕ್ಷಿಣ ಕನ್ನಡದಲ್ಲಿ ಎಕ್ರೆಗೆ 2560 ರೂ. ಕಟ್ಟಿದವರಿಗೆ ಈ ಸಲ 3-4 ಪಟ್ಟು ಹಣ ಬಂದಿದ್ದು, “ಕಟ್ಟಿದ ಹಣ ವಾಪಸ್ ಬಂತು ಅಂತ ಸಮಾಧಾನ ಪಟ್ಟುಕೊಳ್ಳಬೇಕು” ಎನ್ನುವಂತಾಗಿದೆ. ಹೀಗೆ ಮುಂದುವರಿದರೆ ಮುಂದಿನ ವರ್ಷಗಳಲ್ಲಿ ಈ ವಿಮಾ ಯೋಜನೆ ಬಗ್ಗೆ ಕೃಷಿಕರು ಆಸಕ್ತಿ ಕಳೆದುಕೊಳ್ಳುವ ಆತಂಕವಿದೆ.

[t4b-ticker]
error: Content is protected !!