ದೀರ್ಘಕಾಲದ ಕಾಯುವಿಕೆಗೆ ಕೊನೆಗೂ ತೆರೆಬಿದ್ದಿದ್ದು, ಭಾರತೀಯ ರೈಲ್ವೇಸ್ ದಕ್ಷಿಣ ಭಾರತದ ನಿವಾಸಿಗಳಿಗೆ ಭಾರಿ ಸಿಹಿ ಸುದ್ದಿ ನೀಡಿದೆ. ದಕ್ಷಿಣ ಭಾರತದ ಮೊದಲ ‘ವಂದೇ ಭಾರತ್ ಸ್ಲೀಪರ್’ (Vande Bharat Sleeper) ರೈಲು ಬೆಂಗಳೂರು ಮತ್ತು ಮುಂಬೈ ನಡುವೆ ಶೀಘ್ರದಲ್ಲೇ ಸಂಚಾರ ಆರಂಭಿಸಲಿದೆ. ಮುಂದಿನ ವಾರಾಂತ್ಯ ಅಂದರೆ ಅಕ್ಟೋಬರ್ 10 ಅಥವಾ 11 ರಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಖುದ್ದು ಬೆಂಗಳೂರಿಗೆ ಆಗಮಿಸಿ ಈ ಬಹುನಿರೀಕ್ಷಿತ ರೈಲಿಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ನೂತನ ವಂದೇ ಭಾರತ್ ಸ್ಲೀಪರ್ ರೈಲು ಬೆಂಗಳೂರಿನ ಎಸ್‌ಎಂವಿಟಿ (SMVT) ನಿಲ್ದಾಣದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ರಾತ್ರಿ ವೇಳೆ ಸಂಚರಿಸಲಿದೆ. ಪ್ರಸ್ತುತ ಈ ಎರಡೂ ಮಹಾನಗರಗಳ ನಡುವೆ ರೈಲು ಪ್ರಯಾಣಕ್ಕೆ ಅಂದಾಜು 22 ರಿಂದ 24 ಗಂಟೆ ಬೇಕಾಗುತ್ತಿತ್ತು. ಆದರೆ ಈ ವಿಶ್ವದರ್ಜೆಯ ಸ್ಲೀಪರ್ ರೈಲು ಬಂದ ನಂತರ ಪ್ರಯಾಣದ ಅವಧಿ ಬರೋಬ್ಬರಿ 13 ರಿಂದ 14 ಗಂಟೆಗೆ ಇಳಿಕೆಯಾಗಲಿದೆ.
BEML ಸಂಸ್ಥೆಯು ನಿರ್ಮಿಸಿರುವ ಈ 16 ಕೋಚ್‌ಗಳ ಅತ್ಯಾಧುನಿಕ ರೈಲಿನಲ್ಲಿ ಸುಖಕರ ಹಾಗೂ ಸುರಕ್ಷಿತ ಪ್ರಯಾಣದ ಸೌಕರ್ಯಗಳನ್ನು ಕಲ್ಪಿಸಲಾಗಿದೆ.ವಾರಕ್ಕೆ 6 ದಿನ ಸಂಚರಿಸಲಿರುವ ಈ ರೈಲು (ನಂಬರ್ 27651/27652) ಅನಂತಪುರ, ಗುಂತಕಲ್, ರಾಯಚೂರು, ಕಲಬುರಗಿ, ಸೊಲ್ಲಾಪುರ, ಪುಣೆ ಮತ್ತು ಕಲ್ಯಾಣ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಬೆಂಗಳೂರಿನಿಂದ ರಾತ್ರಿ 7.50ಕ್ಕೆ ಹೊರಡುವ ರೈಲು ಮರುದಿನ ಬೆಳಿಗ್ಗೆ 11.55ಕ್ಕೆ ಮುಂಬೈ ತಲುಪಲಿದೆ. ಅದೇ ರೀತಿ ಮುಂಬೈನಿಂದ ರಾತ್ರಿ 8.10ಕ್ಕೆ ಹೊರಟು ಮರುದಿನ ಬೆಳಿಗ್ಗೆ 11.55ಕ್ಕೆ ಬೆಂಗಳೂರು ತಲುಪಲಿದೆ. ನಿಖರ ವೇಳಾಪಟ್ಟಿ ಹಾಗೂ ಟಿಕೆಟ್ ದರದ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ರೈಲ್ವೇ ಮಂಡಳಿಯಿಂದ ಹೊರಬೀಳಲಿದೆ.









































