ಉಜಿರೆ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ಮಂಗಳವಾರ ಉಜಿರೆಯ ತಿಮರೋಡಿ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಸೌಜನ್ಯ ಅವರ ತಾಯಿ ಕುಸುಮಾವತಿ ಕೂಡ ಉಪಸ್ಥಿತರಿದ್ದರು.
14 ವರ್ಷಗಳ ಹೋರಾಟದ ಬಳಿಕ ಮರುತನಿಖೆಗೆ ಆದೇಶಿಸಿರುವುದು ಹೋರಾಟಕ್ಕೆ ದೊರೆತ ದೊಡ್ಡ ಜಯ. ಅಕ್ಟೋಬರ್ 10ಕ್ಕೆ ಸೌಜನ್ಯ ಕೊಲೆಯಾಗಿ 14 ವರ್ಷ ಪೂರ್ಣಗೊಳ್ಳಲಿದ್ದು, ಅಂದು ಉಜಿರೆಯಿಂದ ಬೆಳ್ತಂಗಡಿವರೆಗೆ ‘ನ್ಯಾಯದ ನಡಿಗೆ’ ಹಮ್ಮಿಕೊಳ್ಳಲಾಗುವುದು. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ನ ನ್ಯಾಯವಾದಿಗಳ ತಂಡವೂ ಇದರಲ್ಲಿ ಭಾಗವಹಿಸಲಿದೆ’ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
‘ಎಸ್‌ಐಟಿ ತನಿಖೆಯನ್ನು ಯಾರೇ ನಡೆಸಿದರೂ ನಮಗೆ ಆಕ್ಷೇಪವಿಲ್ಲ. ತನಿಖೆಯಲ್ಲಿ ಯಾವುದೇ ಲೋಪ ಕಂಡುಬಂದರೆ ಅದನ್ನು ಸುಪ್ರೀಂ ಕೋರ್ಟ್‌ನ ಗಮನಕ್ಕೆ ತರಲಾಗುವುದು. ಸಂತೋಷ್ ರಾವ್ ಅವರಿಗೆ ಈಗಾಗಲೇ ಎರಡು ತನಿಖಾ ಸಂಸ್ಥೆಗಳು ಕ್ಲೀನ್‌ಚಿಟ್ ನೀಡಿವೆ. ಈ ಹಿಂದೆ ತನಿಖೆ ನಡೆಸಿದ ಸಂಸ್ಥೆಗಳು ಹಾಗೂ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿ ಕುರಿತು ನ್ಯಾಯಾಲಯವೂ ಪ್ರಶ್ನೆಗಳನ್ನು ಎತ್ತಿದೆ’ ಎಂದು ಅವರು ಹೇಳಿದರು.
‘ಪ್ರಕರಣದ ನೈಜ ಆರೋಪಿಗಳು ಮರುತನಿಖೆಯಿಂದ ಹೊರಬರಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ಅವರು ತಿಳಿಸಿದರು.
ಗಿರೀಶ್ ಮಟ್ಟಣ್ಣನವರ್ ಮಾತನಾಡಿ, 14 ವರ್ಷಗಳ ಬಳಿಕ ಪ್ರಕರಣದ ಮರುತನಿಖೆಗೆ ಆದೇಶಿಸಿರುವುದು ಮಹತ್ವದ ಬೆಳವಣಿಗೆ. ಸ್ಥಳೀಯ ಪೊಲೀಸರು, ಸಿಐಡಿ, ಸಿಒಡಿ ಹಾಗೂ ಸಿಬಿಐ ಈ ಹಿಂದೆ ತನಿಖೆ ನಡೆಸಿವೆ. ಇದೀಗ ರಚನೆಯಾಗಿರುವ ಎಸ್‌ಐಟಿ ಯಾವುದೇ ಸಾಕ್ಷಿದಾರರ ಮೇಲೆ ಒತ್ತಡ ಅಥವಾ ಬೆದರಿಕೆ ಹೇರದೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.’ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಸಾಕ್ಷಿಗಳಿದ್ದಾರೆ. ಅವರ ಹೇಳಿಕೆ ಪಡೆಯುವ ಸಂದರ್ಭದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು. ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಎಲ್ಲ ಸಾಕ್ಷ್ಯಗಳನ್ನು ನೀಡಲಾಗಿದೆ’ ಎಂದರು.
‘ಬುರುಡೆ ಪ್ರಕರಣದ ಎಸ್‌ಐಟಿ ವರದಿ ಬಿಡುಗಡೆ ಮಾಡಿ’
‘ಬುರುಡೆ ಪ್ರಕರಣಕ್ಕೆ ಸಂಬಂಧಿಸಿದ ಎಸ್‌ಐಟಿ ತನಿಖಾ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ಎಸ್‌ಐಟಿ ಜನವರಿಯಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂಬ ಮಾಹಿತಿ ಇದೆ. ಹೀಗಾಗಿ ವರದಿ ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಮಟ್ಟಣ್ಣನವರ್ ಆಗ್ರಹಿಸಿದರು.ಎಸ್‌ಐಟಿ ತಂಡ ಬದಲಾವಣೆಗೆ ಆಗ್ರಹಿಸಿರುವ ಕುರಿತು ಸ್ಪಷ್ಟನೆ ನೀಡಿದ ಅವರು, ‘ಶಶಿಕುಮಾರ್ ಅವರ ಮೇಲೆ ನಮಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಅವರ ವಿರುದ್ಧ ಜನರಿಂದ ದೂರುಗಳು ಹಾಗೂ ಆಕ್ಷೇಪಗಳು ಬಂದಿವೆ. ಯಾರೇ ತನಿಖೆ ನಡೆಸಿದರೂ ನಮಗೆ ಆಕ್ಷೇಪವಿಲ್ಲ. ಸಾಮಾನ್ಯ ಪೊಲೀಸ್ ಕಾನ್‌ಸ್ಟೆಬಲ್ ತನಿಖೆ ನಡೆಸಿದರೂ ಆಕ್ಷೇಪವಿಲ್ಲ’ ಎಂದು ಹೇಳಿದರು.
‘ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯುತ್ತಿರುವುದರಿಂದ ರಾಜ್ಯ ಸರ್ಕಾರವೂ ಈ ಪ್ರಕ್ರಿಯೆಗೆ ಉತ್ತರದಾಯಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಉತ್ತರ ನೀಡಬೇಕು’ ಎಂದು ಅವರು ಹೇಳಿದರು.
















































