ಪಿ.ಟಿ. ಉಷಾ ದಾಖಲೆ ಮುರಿದ ವಿತ್ಯಾ ರಾಮ್‌ರಾಜ್‌ಗೆ 30 ಲಕ್ಷ ರೂ. ಬಹುಮಾನ ಘೋಷಿಸಿದಸಿಎಂ ವಿಜಯ್

Picture of Savistara

Savistara

Bureau Report

ನಗೋಯಾ: ಪ್ರಸಕ್ತ ಆತಿಥೇಯ ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಇದೀಗ 43 ವರ್ಷಗಳ ಹಳೆಯ ದಾಖಲೆಯನ್ನು ವಿತ್ಯಾ ರಾಮರಾಜ್ (Vithya Ramraj) ಮುರಿದು, ತಮ್ಮದೇ ಹೊಸ ರೆಕಾರ್ಡ್ ನಿರ್ಮಿಸಿದ್ದಾರೆ.ಏಷ್ಯನ್ ಗೇಮ್ಸ್‌ನ ಮಹಿಳೆಯರ 400 ಮೀಟ‌ರ್ ಹರ್ಡಲ್ಸ್‌ನಲ್ಲಿ 54.75 ಸೆಕೆಂಡುಗಳನ್ನು ದಾಖಲಿಸುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟ ವಿತ್ಯಾ, ಲೆಜೆಂಡ್ರಿ ಪಿಟಿ ಉಷಾ ಅವರ 43 ವರ್ಷ ಹಳೆಯ ರಾಷ್ಟ್ರೀಯ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಓರ್ವ ಸಾಮಾನ್ಯ ಲಾರಿ ಚಾಲಕನ ಪುತ್ರಿಯ ಐತಿಹಾಸಿಕ ಸಾಧನೆಗೆ ತಮಿಳುನಾಡು ಸಿಎಂ ವಿಜಯ್ 30 ಲಕ್ಷ ರೂ. ನಗದು ಬಹುಮಾನ ಕೂಡ ಘೋಷಿಸಿದ್ದಾರೆ.

ಕಂಚಿನ ಜತೆಗೆ ಪಿಟಿ ಉಷಾ ದಾಖಲೆ ಮುರಿದ ಬಗ್ಗೆ ಮಾತನಾಡಿದ ವಿತ್ಯಾ, “ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಈ ಗೆಲುವು ತುಂಬಾ ಸಂತಸ ತಂದಿದೆ. ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ನಾನು 55 ಸೆಕೆಂಡುಗಳಿಗಿಂತ ಕಡಿಮೆ ಸಮಯದಲ್ಲಿ ಓಟವನ್ನು ಪೂರ್ಣಗೊಳಿಸಿರುವುದು. ಓಟ ಪ್ರಾರಂಭಕ್ಕೂ ಮುನ್ನ ನಾನು ಮಳೆ ನಿಲ್ಲಲಿ ಎಂದು ಪ್ರಾರ್ಥಿಸುತ್ತಿದ್ದೆ. ಅದೃಷ್ಟವಶಾತ್, ಹಾಗೇ ಆಯಿತು. ನಾನು ಈ ಪದಕವನ್ನು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸಹೋದರಿಗೆ ಅರ್ಪಿಸುವೆ. ಮುಂದಿನ ಏಷ್ಯನ್ ಚಾಂಪಿಯನ್‌ಶಿಪ್ ಅಥವಾ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ನಾವಿಬ್ಬರೂ ಒಟ್ಟಿಗೆ ಟ್ರ್ಯಾಕ್‌ಗೆ ಕಮ್‌ಬ್ಯಾಕ್ ಮಾಡುತ್ತೀವಿ ಎಂಬ ಖಾತ್ರಿ ನನಗಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪದಕ ಬೇಕಾದರೆ ಕಾಯುತ್ತೆ. ಆದ್ರೆ, ಸಮಯವಲ್ಲ. ನಾನು ಮೆಡಲ್‌ಗಿಂತ ಸಮಯದ ಮೇಲೆ ಕಣ್ಣಿಟ್ಟಿದ್ದೆ. 54 ಸೆಕೆಂಡುಗಳಲ್ಲಿ ಫಿನಿಶ್ ಮಾಡುತ್ತೇನೆ ಎಂದು ನನ್ನ ಕೋಚ್ ಹೇಳಿದ್ದರು. ಅಂತೆಯೇ ನಾನದನ್ನು ಪೂರ್ಣಗೊಳಿಸಿದ್ದೇನೆ ಎಂದರು. ಮಹಿಳೆಯರ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ವಿತ್ಯಾ ಅವರ ಐತಿಹಾಸಿಕ ಸಾಧನೆಗೆ ಸ್ವತಃ ದಿಗ್ಗಜ ಕ್ರೀಡಾಪಟು ಪಿಟಿ ಉಷಾ ಅವರೇ ಟ್ವಿಟ್ ಮಾಡುವ ಮೂಲಕ ಯುವ ಓಟಗಾರ್ತಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.ಅಭಿನಂದನೆಗಳು ವಿತ್ಯಾ, ದಾಖಲೆಗಳಿರುವುದೇ ಬ್ರೇಕ್ ಮಾಡಲೆಂದು. ಈ ಹಿಂದೆ ನಾವು ನಿರ್ಮಿಸಿದ ರೆಕಾರ್ಡ್ ಗಳನ್ನು ಇಂದಿನ ಯುವ ಕ್ರೀಡಾಪಟುಗಳು ಹಿಂದಿಕ್ಕುವುದನ್ನು ನೋಡುವುದಕ್ಕಿಂತ ಇನ್ನೊಂದು ಪ್ರತಿಫಲ ಕ್ರೀಡಾಪಟುಗಳಿಗಿಲ್ಲ. 43 ವರ್ಷಗಳ ನನ್ನ ಹಳೆಯ ದಾಖಲೆಯನ್ನು ವಿತ್ಯಾ ಅವರು ಮುರಿದಿರುವುದು ನಿಜಕ್ಕೂ ವಿಶೇಷ ಕ್ಷಣ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮೂಲತಃ ತಮಿಳುನಾಡಿನ ಕೊಯಮತ್ತೂರಿನವರಾದ ಇವರು, ದಿಗ್ಗಜ ಕ್ರೀಡಾಪಟು ಪಿ.ಟಿ. ಉಷಾ ಅವರು 42 ವರ್ಷಗಳ ಹಿಂದೆ ಸ್ಥಾಪಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದರು. ವಿದ್ಯಾ ಫೈನಲ್‌ನಲ್ಲಿ 54.75 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿದರು. ಇದರೊಂದಿಗೆ, 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪಿ.ಟಿ. ಉಷಾ ನಿರ್ಮಿಸಿದ್ದ 55.42 ಸೆಕೆಂಡುಗಳ ದಾಖಲೆ ಈಗ ಉಡೀಸ್ ಆಗಿದ್ದು, ಯುವ ಕ್ರೀಡಾಪಟುವಿನ ಹೆಸರು ದಾಖಲೆಗಳ ಪುಟದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

[t4b-ticker]
error: Content is protected !!