ಕರ್ನಾಟಕ ಸೇರಿದಂತೆ ದೇಶದ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವೋಟರ್ ಐಡಿ ಪಟ್ಟಿಯಿಂದ ಹೆಸರು ಕಳೆದುಕೊಂಡ ಅರ್ಹ ಮತದಾರರು ಮತ್ತು ಹೊಸ ಯುವ ಮತದಾರರಿಗೆ ಕೇಂದ್ರ ಚುನಾವಣಾ ಆಯೋಗ (Election Commission) ಅತ್ಯಂತ ಸಿಹಿ ಸುದ್ದಿ ನೀಡಿದೆ.
ಎಸ್.ಐ.ಆರ್ (SIR) ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳಲ್ಲಿ ಹೆಸರು ಕೈಬಿಡಲ್ಪಟ್ಟ ನಾಗರಿಕರನ್ನು ಮತ್ತೆ ಪಟ್ಟಿಗೆ ಸೇರ್ಪಡೆಗೊಳಿಸಲು ‘ವಿಶೇಷ ನೋಂದಣಿ ಅಭಿಯಾನ’ (Special Enrolment Drive) ಕೈಗೊಳ್ಳುವಂತೆ ಚುನಾವಣಾ ಆಯೋಗವು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.ಈ ಹಿಂದೆ ನೋಂದಣಿ ವೇಳೆ ವಿಧಿಸಲಾಗುತ್ತಿದ್ದ ಹೆಚ್ಚುವರಿ ಸ್ವಯಂ ಘೋಷಣಾಪತ್ರದ ಕಿರಿಕಿರಿ ಇನ್ಮುಂದೆ ಇರುವುದಿಲ್ಲ.
ಸಾರ್ವಜನಿಕರು ಹಾಗೂ ಯುವ ಮತದಾರರು ಇನ್ಮುಂದೆ ಸಾಮಾನ್ಯ ‘ಫಾರ್ಮ್ 6’ (Form 6) ಬಳಸಿಯೇ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಮರು-ನೋಂದಣಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದೇ ಬಲವಾದ ಕಾರಣವಿಲ್ಲದೆ ಅಥವಾ ತಾಂತ್ರಿಕ ಲೋಪಗಳಿಂದ ಪಟ್ಟಿಯಿಂದ ಹೊರಗುಳಿದಿರುವ ನೈಜ ಮತದಾರರ ಮನೆಬಾಗಿಲಿಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಸ್ವತಃ ಭೇಟಿ ನೀಡಿ ಅರ್ಜಿಗಳನ್ನು ಭರ್ತಿ ಮಾಡಿಸಿಕೊಳ್ಳಲಿದ್ದಾರೆ. ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರ (BLA) ಸಹಕಾರದೊಂದಿಗೆ ಈ ಪ್ರಕ್ರಿಯೆ ನಡೆಯಲಿದೆ.
ದೇಶಾದ್ಯಂತ ಸುಮಾರು 13 ಕೋಟಿಗೂ ಹೆಚ್ಚು ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿರುವ ಹಿನ್ನೆಲೆಯಲ್ಲಿ ಈ ಪರಿಶೀಲನಾ ಅಭಿಯಾನ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ. ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಪರಿಶೀಲನಾ ಅವಧಿಯನ್ನು ಲಂಬಿಸಲಾಗಿದ್ದು, ಕರ್ನಾಟಕ, ಬಿಹಾರ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ SIR ಪ್ರಕ್ರಿಯೆ ಪೂರ್ಣಗೊಂಡಿರುವ ರಾಜ್ಯಗಳ ಜನರಿಗೆ ತಮ್ಮ ಮತದಾನದ ಹಕ್ಕನ್ನು ಮರಳಿ ಪಡೆಯಲು ಇದು ಶ್ರೇಷ್ಠ ಅವಕಾಶವಾಗಿದೆ.














































