ಸ್ವಚ್ಛ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು: ಸಂಸದ ಬಿ.ವೈ. ರಾಘವೇಂದ್ರ |ಶಿಕಾರಿಪುರದಲ್ಲಿ ಪೌರ ಕಾರ್ಮಿಕರೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಭಾಗಿ

Picture of Savistara

Savistara

Bureau Report

ಶಿಕಾರಿಪುರ, ಅಕ್ಟೋಬರ್ 2: ಶ್ರೀ ನರೇಂದ್ರ ಮೋದೀಜಿಯವರ ಒಂದು ತಿಂಗಳ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಶಿಕಾರಿಪುರದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರು ಪೌರ ಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು, ಸ್ವಚ್ಛತಾ ಕಾರ್ಯದ ಮಹತ್ವವನ್ನು ಸಾರಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಚ್ಛತೆ ಎಂಬುದು ಕೇವಲ ಪೌರ ಕಾರ್ಮಿಕರ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ನಮ್ಮ ಮನೆ, ರಸ್ತೆ, ಸಾರ್ವಜನಿಕ ಸ್ಥಳಗಳು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಮತ್ತು ಸುಂದರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.ಪೌರ ಕಾರ್ಮಿಕರು ಪ್ರತಿನಿತ್ಯ ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛ ಪರಿಸರಕ್ಕಾಗಿ ಶ್ರಮಿಸುತ್ತಿದ್ದು, ಅವರ ಸೇವೆ ಅತ್ಯಂತ ಮಹತ್ವದ್ದಾಗಿದೆ.

ಸಾರ್ವಜನಿಕರು ಪೌರ ಕಾರ್ಮಿಕರೊಂದಿಗೆ ಸಹಕರಿಸುವುದರ ಜೊತೆಗೆ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ, ನಿಗದಿತ ಸ್ಥಳಗಳಲ್ಲಿ ವಿಲೇವಾರಿ ಮಾಡಬೇಕು. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನೀಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದೀಜಿಯವರ ನೇತೃತ್ವದಲ್ಲಿ ದೇಶದಾದ್ಯಂತ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಸ್ವಚ್ಛ ಭಾರತ ಅಭಿಯಾನದ ಮೂಲಕ ಸ್ವಚ್ಛತೆ ಜನಾಂದೋಲನವಾಗಿ ರೂಪುಗೊಂಡಿದೆ. ಸ್ವಚ್ಛತೆ, ಶೌಚಾಲಯ ನಿರ್ಮಾಣ, ತ್ಯಾಜ್ಯ ನಿರ್ವಹಣೆ ಹಾಗೂ ಸ್ವಚ್ಛ ಪರಿಸರದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪ್ರಯತ್ನಗಳನ್ನು ಮತ್ತಷ್ಟು ಯಶಸ್ವಿಗೊಳಿಸಲು ಜನಸಾಮಾನ್ಯರ ಸಕ್ರಿಯ ಸಹಭಾಗಿತ್ವ ಅಗತ್ಯವಾಗಿದೆ ಎಂದರು.ಮಹಾತ್ಮ ಗಾಂಧೀಜಿಯವರು ಸ್ವಚ್ಛತೆಗೆ ನೀಡಿದ ಮಹತ್ವ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಸರಳತೆ, ಶಿಸ್ತು ಮತ್ತು ದೇಶಸೇವೆಯ ಆದರ್ಶಗಳನ್ನು ಸ್ಮರಿಸಿ, ಅವರ ಆಶಯಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಂಸದರು ಹೇಳಿದರು.

“ಸ್ವಚ್ಛ ಶಿಕಾರಿಪುರ–ಸುಂದರ ಶಿಕಾರಿಪುರ” ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರೂ ಸಂಕಲ್ಪ ಮಾಡಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಬಿಜೆಪಿ ಮುಖಂಡರು, ಪೌರ ಕಾರ್ಮಿಕರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

[t4b-ticker]
error: Content is protected !!