2028 ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಪುತ್ತೂರು ದೇವಸ್ಥಾನದಲ್ಲಿ ಆಡಳಿತ : ಮುರಳಿಭಟ್ ಹಸಂತಡ್ಕ: ಧಾರ್ಮಿಕ ಕೇಂದ್ರದಲ್ಲಿ ರಾಜಕೀಯ ಹಸ್ತಕ್ಷೇಪ, ಅವ್ಯವಹಾರ ಆರೋಪಿಸಿ ಬಿಜೆಪಿಯಿಂದ ಪ್ರತಿಭಟನೆ

Picture of Savistara

Savistara

Bureau Report

ಪುತ್ತೂರು: ದೇವಸ್ಥಾನ ಎಲ್ಲ ಹಿಂದುಗಳ ಸೊತ್ತಾಗಿ, ಭಕ್ತ ಸಂಸ್ಕೃತಿಯ ಕೇಂದ್ರವಾಗಿದೆ. 2028ರ ಚುನಾವಣೆಯ ಗುರಿಯನ್ನಿಟ್ಟುಕೊಂಡು ದೇವಸ್ಥಾನದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಅರಸರ ಆಡಳಿತದ ಕಾಲದಲ್ಲಿದ್ದಂತೆ ದೇವಸ್ಥಾನದ ಆಡಳಿತ ನಡೆಯುತ್ತಿದೆ. ಲೆಕ್ಕಾಚಾರದಲ್ಲಿ ಪಾರದರ್ಶಕತೆಯಿಲ್ಲದೆ, ಭಕ್ತ ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಸಾವಿರಾರು ಭಕ್ತರ ಸ್ವಯಂಸೇವೆಯ ಮೂಲಕ ಮಾಡುವ ಕಾರ್ಯ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಯಾಗಿದೆ. ಬೆಂಗಳೂರಿನವರ ದುಡ್ಡಿನಲ್ಲಿ ಮಾಡುವ ಕೆಲಸ ಅಭಿವೃದ್ಧಿಯಾಗಲು ಸಾಧ್ಯವಾ ಎಂದು ಧಾರ್ಮಿಕ ಮುಖಂಡ ಮುರಳೀಕೃಷ್ಣ ಹಸಂತಡ್ಕ ಹೇಳಿದರು.

ಅಮ‌ರ್ ಜವಾನ್‌ ಜ್ಯೋತಿಯ ಪಕ್ಕದಲ್ಲಿ ಪುತ್ತೂರು ಬಿಜೆಪಿ ವತಿಯಿಂದ ಧಾರ್ಮಿಕ ಕ್ಷೇತ್ರಗಳಲ್ಲಿನ ಭ್ರಷ್ಠಾಚಾರ, ರಾಜಕೀಯ ಹಸ್ತಕ್ಷೇಪ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಸೀಮಾ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಮನೆದೇವರ ವ್ಯವಸ್ಥೆಯಂತೆ ನಡೆದುಕೊಳ್ಳುತ್ತಿದೆ. ಸ್ವಂತ ಹಕ್ಕಿನ ಜಾಗದಲ್ಲಿ ಕೆಲಸ ಮಾಡಿದಂತೆ ಎಗ್ರೇಡ್ ದೇವಸ್ಥಾನದಲ್ಲಿ ಮಾಡುತ್ತಿದ್ದಾರೆ. ಆರಾಧ್ಯ ಮೂರ್ತಿಯ ವಿಚಾರವನ್ನು ರಸ್ತೆಗೆ ತರಬಾರದೆಂದು ಇಲ್ಲಿಯವರೆಗೆ ಸುಮ್ಮನಿದ್ದೆವು. ದೇವಸ್ಥಾನದ, ಧರ್ಮದ ವಿಚಾರದಲ್ಲಿ ರಾಜಕೀಯ ಮಾಡಬಾರದೆಂದು ಸುಮ್ಮನಿದ್ದೇವು. ಅವ್ಯವಹಾರ, ರಾಜಕೀಯ ಹಸ್ತಕ್ಷೇಪದ ವಿರುದ್ಧ ಹೋರಾಟ ಮಾಡುವುದಕ್ಕೆ ಭಾರತೀಯ ಜನತಾ ಪಾರ್ಟಿ ಮತ್ತೆ ಎದ್ದು ನಿಂತಿದೆ. ವೈಯಕ್ತಿಕ ಟೀಕೆಗಳನ್ನು ಮಾಡುವ ತಾಕತ್ತು ನಮಗೂ ಇದೆ ಎಂದು ತಿಳಿಸಿದರು.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರಿಗೆ ಸಹಾಯಕ ಆಯುಕ್ತರ ಮೂಲಕ ದೂರು ನೀಡಲಾಯಿತು. ಕಂದಾಯ ಇಲಾಖೆಯ ಸುಲೋಚನ ದೂರು ಸ್ವೀಕರಿಸಿದರು.

ಮಾಜಿ ಶಾಸಕ ಸಂಜೀವ ಮಠಂದೂರು, ಮುಖಂಡರಾದ ಶಿವಕುಮಾ‌ರ್, ಪ್ರಸನ್ನ ಮಾರ್ತ ಉಪಸ್ಥಿತರಿದ್ದರು. ಸುನಿಲ್ ದಡ್ಡು ಸ್ವಾಗತಿಸಿದರು. ದಯಾನಂದ ಶೆಟ್ಟಿ ಪ್ರಸ್ತಾವನೆಗೈದರು. ಲೋಕೇಶ್ ಚಾಕೊಟೆ ದೂರಿನ ಪ್ರತಿ ಓದಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

[t4b-ticker]
error: Content is protected !!