ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ನಿಧನ

Picture of Savistara

Savistara

Bureau Report

ತಿಪಟೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಬಿ.ಸಿ.ನಾಗೇಶ್ (67) ಹೃದಯಾಘಾತದಿಂದ ಬೆಂಗಳೂರಿನಲ್ಲಿ ಮಂಗಳವಾರ ನಿಧನರಾದರು.

ಬೆಂಗಳೂರಿನ ತಮ್ಮ ಸಹೋದರಿಯ ಮನೆಯಲ್ಲಿ ಇದ್ದರು. ಮೃತರಿಗೆ ಪತ್ನಿ ವೀಣಾ, ಮಗ ವಿಶ್ವದೀಪ್, ಮಗಳು ಶಾರದಾ ಇದ್ದಾರೆ.ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಶಾಲಾ ಶಿಕ್ಷಣ ಸಚಿವರಾಗಿದ್ದರು. 2008, 2018ರಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿದ್ದರು.ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬುಧವಾರ ಬೆಳಿಗ್ಗೆ 9 ಗಂಟೆಯವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ನಂತರ ತಿಪಟೂರಿಗೆ ತೆಗೆದುಕೊಂಡು ಹೋಗಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

1959ರ ಜುಲೈ 1ರಂದು ಜನಿಸಿದ್ದ ಬಿ.ಸಿ.ನಾಗೇಶ್, ತುಮಕೂರು ಜಿಲ್ಲಾ ಬಿಜೆಪಿಯ ಪ್ರಮುಖ ನಾಯಕರು. ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ರಾಜಕಾರಣ ಪ್ರವೇಶಿಸಿದ್ದರು.

ತಿಪಟೂರು ವಿಧಾನಸಭಾ ಕ್ಷೇತ್ರದಿಂದ 2008ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2013ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. 2018ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನ

ಕುಟುಂಬದವರು ನೀಡಿರುವ ಮಾಹಿತಿಯಂತೆ, ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ಬಿ.ಸಿ. ನಾಗೇಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು.ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.ಬೆಂಗಳೂರಿನಲ್ಲಿ ಸಾರ್ವಜನಿಕ ದರ್ಶನದ ಬಳಿಕ ಅವರ ಪಾರ್ಥಿವ ಶರೀರವನ್ನು ಸ್ವಕ್ಷೇತ್ರ ತಿಪಟೂರಿಗೆ ಕೊಂಡೊಯ್ಯಲಾಗುವುದು. ತಿಪಟೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕ್ಷೇತ್ರದ ಜನತೆ, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಲಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಮಾಜಿ ಶಾಸಕ, ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ನಿಧನಕ್ಕೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ತಿಪಟೂರು ಕ್ಷೇತ್ರದ ಜನತೆ ಕಂಬನಿ ಮಿಡಿದಿದ್ದಾರೆ.

[t4b-ticker]
error: Content is protected !!