ಫೋಟೋಗಳೆಂದರೆ ಬರೀ ಬಣ್ಣಗಳ ಸಂಯೋಜನೆಯಲ್ಲ, ಅವು ನೆನಪುಗಳ ಖಜಾನೆ, ಹೇಳಲಾಗದ ಭಾವನೆಗಳ ಅಭಿವ್ಯಕ್ತಿ. ಸಮಯ ಸಾಗಿದರೂ, ಕಾಲದ ಚಕ್ರವನ್ನು ಕ್ಷಣಕಾಲ ಸ್ಥಬ್ದಗೊಳಿಸಿ, ಆ ಕ್ಷಣವನ್ನು ಶಾಶ್ವತವಾಗಿ ನಮ್ಮೊಂದಿಗೆ ಉಳಿಸುವ ಕಲೆ ಫೋಟೊಗಳಿಗಿರುತ್ತದೆ.
ಲೂಯಿಸ್ ಡಾಗೆರೆ ಎಂಬುವವರು 1839ರಲ್ಲಿ ‘ಡಾಗ್ಯುರೋಟೈಪ್’ ಎಂಬ ಕ್ಯಾಮೆರಾವನ್ನು ಅಭಿವೃದ್ಧಿಪಡಿಸಿದ್ದರು. ಇದನ್ನು ಫ್ರೆಂಚ್ ಸರ್ಕಾರವು ಅಧಿಕೃತವಾಗಿ 1839ರ ಆಗಸ್ಟ್ 19ರಂದು ಪರಿಚಯಿಸಿತು. ಇದರ ನೆನಪಿಗಾಗಿ ಪ್ರತಿ ವರ್ಷ ಆಗಸ್ಟ್ 19 ಅನ್ನು ವಿಶ್ವ ಛಾಯಾಗ್ರಹಣ ದಿನವಾಗಿ ಆಚರಿಸಲಾಗುತ್ತದೆ.1800ರ ಮಧ್ಯಭಾಗದಲ್ಲಿ ಭಾರತದಲ್ಲಿಯೂ ಫೋಟೊ ಕ್ಲಿಕ್ಕಿಸುವುದು ಆರಂಭವಾಗಿತ್ತು. ಜನರು ತಮ್ಮ ಸ್ಮರಣೀಯ ಕ್ಷಣಗಳನ್ನು ಕ್ಲಿಕ್ಕಿಸಲು ಆರಂಭಿಸಿದ್ದರು. ಹಾಗಾದರೆ, ಭಾರತಕ್ಕೆ ಕ್ಯಾಮೆರಾ ತಂದವರು ಯಾರು, ದೇಶದ ಮೊದಲ ಛಾಯಾಗ್ರಾಹಕ ಯಾರು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಭಾರತೀಯರಲ್ಲಿ ಛಾಯಾಗ್ರಹಣವನ್ನು ಒಂದು ವೃತ್ತಿಯಾಗಿ ಮತ್ತು ಕಲೆಯಾಗಿ ಬೆಳೆಸಿದ ಕೀರ್ತಿ ರಾಜಾ ದೀನ್ ದಯಾಳ್ ಅವರಿಗೆ ಸಲ್ಲುತ್ತದೆ.
ಛಾಯಾಗ್ರಹಣ ವೃತ್ತಿಯನ್ನು ಆರಂಭಿಸಿದ ಮೊದಲ ಭಾರತೀಯ ಎನಿಸಿಕೊಂಡಿರುವ ಕೀರ್ತಿ ರಾಜಾ ಅವರು ಬ್ರಿಟಿಷ್ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದರು. 1874ರಲ್ಲಿ ಹವ್ಯಾಸಕ್ಕಾಗಿ ಛಾಯಾಗ್ರಹಣವನ್ನು ಆರಂಭಿಸಿದ್ದರು. ಬಳಿಕ 1885ರಲ್ಲಿ ಸಂಪೂರ್ಣವಾಗಿ ಛಾಯಾಗ್ರಹಣದಲ್ಲಿ ತೊಡಗಿಕೊಂಡರು.
ಛಾಯಾಗ್ರಹಣ ಆರಂಭಿಸಿದ 2 ವರ್ಷಗಳಲ್ಲಿಯೇ ಆ ಕಾಲದ ಅತ್ಯುತ್ತಮ ಛಾಯಾಗ್ರಹಕ ಎಂಬ ಖ್ಯಾತಿಗಳಿಸಿದ್ದರು. ಅವರನ್ನು ಅಂದಿನ ಹೈದರಾಬಾದ್‌ನ ಆರನೇ ನಿಜಾಮನ ಆಸ್ಥಾನದಲ್ಲಿ ಛಾಯಾಗ್ರಾಹಕರಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಅಲ್ಲಿಂದ, ಅವರು ರಾಜಮನೆತನದ ಫೋಟೊ ತೆಗೆಯಲಾರಂಭಿಸಿದರು.
ಭಾರತಕ್ಕೆ ಕ್ಯಾಮೆರಾ ಹೇಗೆ ಬಂತು?
1850ರ ದಶಕದಲ್ಲಿ ಕ್ಯಾಮೆರಾ ಭಾರತಕ್ಕೆ ಕಾಲಿಟ್ಟಿತ್ತು. ಬಹುಪಾಲು ಬ್ರಿಟಿಷ್ ಅಧಿಕಾರಿಗಳ ಬಳಿ ಕ್ಯಾಮೆರಾ ಇದ್ದವು. ಆರಂಭದಲ್ಲಿ ಕ್ಯಾಮೆರಾದ ಗಾತ್ರ ಹಾಗೂ ಅದರ ವೇಗ ತುಂಬಾ ನಿಧಾನವಾಗಿತ್ತು. ವಿವಿಧ ಉಪಕರಣಗಳನ್ನು ಅಳವಡಿಸಿ ಚಿತ್ರವನ್ನು ಸೆರೆಹಿಡಿಯಬೇಕಿತ್ತು. ಇದು ದುಬಾರಿಯಾಗಿದ್ದರಿಂದ ರಾಜರು ಹಾಗೂ ಶ್ರೀಮಂತರ ಬಳಿ ಮಾತ್ರ ಕ್ಯಾಮೆರಾಗಳಿದ್ದವು.1840ರಲ್ಲಿ ಕಲ್ಕತ್ತಾದ ‘ಸಾನ್ ಸೌಸಿ ಥಿಯೇಟರ್’ ಅನ್ನು ಸೆರೆಹಿಡಿಯಲಾಗಿತ್ತು. ಇದು ಭಾರತದಲ್ಲಿ ಲಭ್ಯವಿರುವ ಅತ್ಯಂತ ಹಳೆಯ ಫೋಟೊವಾಗಿದೆ. 1857ರ ದಂಗೆಯ ಕೆಲವು ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಮಾತ್ರವಲ್ಲದೆ, ಭಾರತೀಯರ ಜೀವನ, ಹಬ್ಬಗಳು ಸೇರಿದಂತೆ ಕೆಲವು ಪ್ರದೇಶಗಳ ಫೋಟೊಗಳನ್ನು ತೆಗೆಯಲಾಗಿದೆ.













































