ಸುಳ್ಯ/ಐವರ್ನಾಡು: ಕೃಷಿಕರನ್ನು ನಿರಂತರವಾಗಿ ಕಾಡುತ್ತಿರುವ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವ ಹಾಗೂ ಪರಿಹಾರ ಉಪಾಯಗಳ ಕುರಿತಾದ ವಿಶೇಷ ‘ಮಾಹಿತಿ ಕಾರ್ಯಾಗಾರ’ವು ನಾಳೆ (ಮಂಗಳವಾರ, ಸೆಪ್ಟೆಂಬರ್ 22) ಬೆಳಿಗ್ಗೆ 11 ಗಂಟೆಗೆ ಐವರ್ನಾಡು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಲಿದೆ.
ಕೃಷಿಕ ಹಿತರಕ್ಷಣಾ ಸಮಿತಿ, ಐವರ್ನಾಡು ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮವನ್ನು ಸುಳ್ಯ ತಾಲೂಕು ದಂಡಾಧಿಕಾರಿಗಳಾದ (ತಹಶೀಲ್ದಾರ್) ಶ್ರೀಮತಿ ಮಂಜುಳ ಎಂ. K.A.S. ಅವರು ಉದ್ಘಾಟಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (A.C.F.) ಶ್ರೀ ಸುಬ್ಬಯ್ಯ ನಾಯ್ಕ ಹಾಗೂ ವಲಯ ಅರಣ್ಯಾಧಿಕಾರಿ (R.F.O.) ಶ್ರೀ ಕಿರಣ್ ಅವರು ಭಾಗವಹಿಸಿ, ಕೃಷಿಕರಿಗೆ ಅಗತ್ಯ ಮಾಹಿತಿ ಮತ್ತು ಪರಿಹಾರದ ಮಾರ್ಗಗಳನ್ನು ತಿಳಿಸಿಕೊಡಲಿದ್ದಾರೆ.
ಕೃಷಿಕರ ಪ್ರಶ್ನೆಗಳಿಗೆ ಮುಕ್ತ ಅವಕಾಶ: ಈ ಕಾರ್ಯಾಗಾರದಲ್ಲಿ ಕೃಷಿಕರು ತಮ್ಮ ನೈಜ ಸಮಸ್ಯೆಗಳನ್ನು ಹಾಗೂ ಪರಿಹಾರದ ಕುರಿತಾದ ಯಾವುದೇ ಗೊಂದಲಗಳನ್ನು ಅರಣ್ಯಾಧಿಕಾರಿಗಳ ಮುಂದಿಟ್ಟು ನೇರವಾಗಿ ಪ್ರಶ್ನೆಗಳನ್ನು ಕೇಳಲು ಅವಕಾಶ ಕಲ್ಪಿಸಲಾಗಿದೆ. ರೈತರು ತಮ್ಮ ಪ್ರಶ್ನೆಗಳನ್ನು ಸಂಕ್ಷಿಪ್ತವಾಗಿ ಹಾಗೂ ಚುಟುಕಾಗಿ ಕೇಳಿ, ಈ ಮಾಹಿತಿ ಕಾರ್ಯಾಗಾರದ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಮಿತಿಯು ವಿನಂತಿಸಿದೆ.
ಪುತ್ತೂರು ಮತ್ತು ಸುಳ್ಯ ವಲಯಕ್ಕೆ ಒಳಪಡುವ ಎಲ್ಲಾ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಾಗಾರದಲ್ಲಿ ಪಾಲ್ಗೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಕೃಷಿಕ ಹಿತರಕ್ಷಣಾ ಸಮಿತಿಯ ಸಂಚಾಲಕರಾದ ಕೃಷ್ಣ ಪ್ರಸಾದ್ ಮಡ್ತಿಲ, ಸಹ ಸಂಚಾಲಕರಾದ ಗಣೇಶ್ ಕೊಚ್ಚಿ, ಸಾತ್ವಿಕ್ ಕುದುಂಗು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ಆತ್ಮೀಯವಾಗಿ ಆಹ್ವಾನಿಸಿದ್ದಾರೆ. ಕಾರ್ಯಕ್ರಮದ ನಂತರ ಭೋಜನದ ವ್ಯವಸ್ಥೆ ಇರಲಿದೆ.














































